ಬಂಟ್ವಾಳ (ದಕ್ಷಿಣ ಕನ್ನಡ): ಮನೆಯ ಮೇಲಿಂದ ಕೆಳಗೆಬಿದ್ದು 15 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಂಟ್ವಾಳದಲ್ಲಿ ಕಳೆದ ರಾತ್ರಿ ನಡೆದಿದೆ. ಬಂಟ್ವಾಳದ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಪುತ್ರ ಆದಿಶ್(15) ಮೃತ ಬಾಲಕ. ಬಾಲಕನಿಗೆ ಮೊಬೈಲ್ ಗೀಳು ಇತ್ತು. ಅಂತೆಯೇ ಯಾವಾಗಲೂ ಮೊಬೈಲ್ನಲ್ಲೇ ಮುಳುಗಿರುತ್ತಿದ್ದನಂತೆ. ರಾತ್ರಿ ವೇಳೆ ಮೊಬೈಲ್ ನೋಡುತ್ತ ಹೋಗುವಾಗ ಆಯತಪ್ಪಿ ಮನೆಯ ಮೇಲಿಂದ ಕೆಳಗೆ ಬಿದ್ದು ಬಾಲಕ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮನೆಯವರಿಗೆ ಗೊತ್ತಿಲ್ಲದಂತೆ ಮೊಬೈಲ್ ಹಿಡಿದುಕೊಂಡು ಮನೆ ಮೇಲೆ ಹೋಗಿದ್ದ ವೇಳೆ ಕೆಳಗೆ ಬಿದ್ದಿದ್ದಾನೆ. ಘಟನೆಯಲ್ಲಿ ಬಾಲಕನ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಬಾಲಕನ ತಂದೆ ಬೆಳಗ್ಗೆ ಎದ್ದು ಹೊರಗೆ ಬಂದಾಗ ಆತ ಕೆಳಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ಮನೆ ಮೇಲಿಂದ ಬಟ್ಟೆ ತೊಳೆಯುವ ಕಲ್ಲಿನ ಮೇಲೆ ಬಾಲಕ ಬಿದ್ದಿರುವುದು ಕಂಡುಬಂದಿದೆ.
ಬಾಲಕನಿಗೆ ರಾತ್ರಿ ವೇಳೆಯೂ ಮೊಬೈಲ್ ಬಳಕೆ ಹಾಗೂ ಟಿವಿ ನೋಡುವ ಅಭ್ಯಾಸ ಇತ್ತು ಎನ್ನಲಾಗಿದೆ. ಮನೆ ತಗ್ಗು ಪ್ರದೇಶದಲ್ಲಿರುವ ಕಾರಣಕ್ಕೆ ಪಿಲ್ಲರ್ ಹಾಕಿ ಮೇಲೆ ಮನೆ ನಿರ್ಮಿಸಿದ್ದರು. ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.