ಕರ್ನಾಟಕ

karnataka

ETV Bharat / state

ಸರ್ಕಾರಿ ಶಾಲೆಗೆ ದಾಖಲಾಗುವ ಮಗುವಿನ ಹೆಸರಿನಲ್ಲಿ ₹1000 ಠೇವಣಿ: ದಾಖಲಾತಿ ಹೆಚ್ಚಿಸಲು ಶಿಕ್ಷಕರ ಪ್ರಯತ್ನ, ಹಣ ನೀಡಲು ಮುಂದಾದ ದಾನಿ

ದಾವಣಗೆರೆಯ ಚನ್ನಗಿರಿ ತಾಲೂಕಿನ ಕೆಂಗಾಪುರ ಎಂಬ ಪುಟ್ಟ ಹಳ್ಳಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಶಿಕ್ಷಕರು ವಿನೂತನ ಪ್ರಯೋಗವೊಂದನ್ನು ಕೈಗೊಂಡಿದ್ದಾರೆ.

By ETV Bharat Karnataka Team

Published : Mar 8, 2024, 10:02 PM IST

Govt Primary School
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಶಾಲೆಯ ಶಿಕ್ಷಕ ಲಕ್ಷ್ಮೀನಾರಾಯಣ್

ದಾವಣಗೆರೆ :ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕಂದ್ರೆ ಮೂಗು ಮುರಿಯುವ ಪೋಷಕರೇ ಹೆಚ್ಚು. ಸರ್ಕಾರಿ ಶಾಲೆಯಲ್ಲಿ ಎಲ್ಲ ಉಚಿತ ಸ್ವಾಮಿ, ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದರೂ ಕೂಡ ಪೋಷಕರು ಮಾತ್ರ ಮಕ್ಕಳನ್ನು ದಾಖಲಾತಿ ಮಾಡಲು ಹಿಂದೇಟು ಹಾಕ್ತಾರೆ‌. ಇದರಿಂದ ಸರ್ಕಾರಿ ಶಾಲೆಗಳ ದಾಖಲಾತಿ ದಿನೇ ದಿನೆ ಕುಸಿತ ಕಂಡಿದೆ. ಸರ್ಕಾರಿ ಶಾಲೆಯ ದಾಖಲಾತಿ ಹೆಚ್ಚಿಸಲು ಚನ್ನಗಿರಿ ತಾಲೂಕಿನ ಕೆಂಗಾಪುರ ಎಂಬ ಪುಟ್ಟ ಹಳ್ಳಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಶಾಲೆಗೆ ವಿದ್ಯಾರ್ಥಿಗಳನ್ನು ಸೆಳೆಯಲು ವಿನೂತನ ಪ್ರಯೋಗವೊಂದನ್ನು ಮಾಡ್ತಿದ್ದಾರೆ.

ಮಕ್ಕಳನ್ನು ಹಾಗೂ ಪೋಷಕರನ್ನು ಸರ್ಕಾರಿ ಶಾಲೆಯತ್ತ ಸೆಳೆಯಲು ಠೇವಣಿ ಎಂಬ ಅಸ್ತ್ರವನ್ನು ಪ್ರಯೋಗ ಮಾಡಿದ್ದಾರೆ. ಶಿಕ್ಷಣ 'ಉಚಿತ ಠೇವಣಿ ಖಚಿತ' ಎಂಬ ಘೋಷ ವಾಕ್ಯ ಬಳಕೆ ಮಾಡಿ 2024 - 25ನೇ ಸಾಲಿಗೆ ಈ ಸರ್ಕಾರಿ ಶಾಲೆಗೆ ದಾಖಲಾಗುವ ಒಂದು ಮಗುವಿನ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ತಲಾ 1,000 ಠೇವಣಿ ಇಡುವುದಾಗಿ ಇಲ್ಲಿನ ಮುಖ್ಯ ಶಿಕ್ಷಕ ಜಿ. ಬಿ ಚಂದ್ರಾಚಾರಿ ಹಾಗೂ ಸಹ ಶಿಕ್ಷಕರಾದ ಲಕ್ಷ್ಮಿ ನಾರಾಯಣ್ ಅವರು ಘೋಷಿಸಿದ್ದಾರೆ.

ಸರ್ಕಾರಿ ಶಾಲೆಯನ್ನು ಉಳಿಸುವ ಸಲುವಾಗಿ ಈ ವಿನೂತನ ಪ್ರಯೋಗ ಮಾಡ್ತಿದ್ದು, ಈಗಾಗಲೇ ಪ್ರಚಾರ ಮಾಡಲು ಕರ ಪತ್ರಗಳನ್ನು ಮಾಡಿಸಿ ಪ್ರತಿಯೊಂದು ಗ್ರಾಮಗಳಿಗೆ ಹಂಚಲಾಗುತ್ತಿದೆ. ಇದಲ್ಲದೇ ಖುದ್ದು ಬಿಇಒ ಅವರ ಗಮನಕ್ಕೆ ತರಲಾಗಿದ್ದು, ಈ ವಿನೂತನ ಪ್ರಯತ್ನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಶಿಕ್ಷಕ ಲಕ್ಷ್ಮೀನಾರಾಯಣ ಅವರು ತಿಳಿಸಿದ್ದಾರೆ.

ಕೆಂಗಾಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಕಡಿಮೆ ಇರುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿ ಶಾಲೆಯನ್ನು ಮುಚ್ಚುವ ನಿರ್ಧಾರಕ್ಕೆ ಶಿಕ್ಷಣ ಇಲಾಖೆ ಮುಂದಾಗುತ್ತದೆ ಎಂದು ಶಿಕ್ಷಕರು ಹೇಳುತ್ತಿದ್ದಾರೆ. ಇದನ್ನು ಮನಗಂಡ ಕೆಂಗಾಪುರ ಶಾಲೆಯ ಶಿಕ್ಷಕರು ದಾನಿಗಳ ನೆರವಿನಿಂದ ಮಗುವಿನ ಹೆಸರಿನಲ್ಲಿ ಠೇವಣಿ ಇರಿಸುವ ಹೊಸ ಪ್ರಯೋಗಕ್ಕೆ ಕೈಹಾಕಿದ್ದಾರೆ. ಇದಲ್ಲೆದೇ ಹಾಲಿ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರುವ ಮಕ್ಕಳಿಗೆ ಸೇರಿ ಠೇವಣಿ ಮಾಡಲು ಶಿಕ್ಷಕರು ನಿರ್ಧಾರ ಮಾಡಿದ್ದಾರೆ. ಈ ಪ್ರಕ್ರಿಯೆ ಜೂನ್ ತಿಂಗಳಿಂದ ಆರಂಭ ಆಗಲಿದೆ.

ಇದೇ ಶಾಲೆಯ ಹಳೇ ವಿದ್ಯಾರ್ಥಿಯಿಂದ 50 ಸಾವಿರ ದೇಣಿಗೆ: ಕೆಂಗಾಪುರ ಗ್ರಾಮದ ನಿವಾಸಿಯಾದ ಕಾರಭಾರಿ ಹನುಮಾ ನಾಯ್ಕ ಅವರ ಪುತ್ರ ಹೆಚ್. ಗಣೇಶ ನಾಯ್ಕ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಇದೀಗ ಸಾಸ್ವೇಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯ ಶಿಕ್ಷಕರ ಮನವಿಗೆ ಸ್ಪಂದಿಸಿದ ಹೆಚ್. ಗಣೇಶ ನಾಯ್ಕ ಅವರು ದಾಖಲಾತಿ ಹೆಚ್ಚಿಸಲು ಮಕ್ಕಳ ಹೆಸರಿನ ಮೇಲೆ ಠೇವಣಿ ಇಡಲು ಶಾಲೆಗೆ ₹ 50,000 ರೂಪಾಯಿ ಹಣವನ್ನು ತಮ್ಮ ತಂದೆ ಹನುಮಾನಾಯ್ಕ ಕಾರಭಾರಿ ಅವರ ಹೆಸರಿನಲ್ಲಿ ದೇಣಿಗೆ ನೀಡಲಿದ್ದಾರೆ. ಈ ಹಣವನ್ನು ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸಲಾಗುವುದು ಎಂದು ಮುಖ್ಯಶಿಕ್ಷಕ ಜಿ. ಬಿ ಚಂದ್ರಾಚಾರಿ, ಸಹ ಶಿಕ್ಷಕ ಲಕ್ಷ್ಮೀನಾರಾಯಣ ಅವರು ತಿಳಿಸಿದ್ದಾರೆ.

ಇದಲ್ಲದೆ ಶ್ರೀ ಡಾ. ರಾಜಾನಾಯ್ಕ್ ಎಸ್ ಇವರು ಶಾಲಾ ಮೈದಾನ ಅಭಿವೃದ್ಧಿಗಾಗಿ ಸುಮಾರು 2 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮಾಡಿಸಲು ಮುಂದಾಗಿದ್ದಾರೆ. ಶಿವನಾಯ್ಕ್ ಎಂಬುವವರು ಶಾಲಾಭಿವೃದ್ಧಿಗಾಗಿ 25,000 ಕೊಡಲು ಒಪ್ಪಿರುತ್ತಾರೆ ಎಂದು ಶಾಲೆಯ ಶಿಕ್ಷಕ ಲಕ್ಷ್ಮೀನಾರಾಯಣ ಅವರು ಮಾಹಿತಿ ನೀಡಿದರು.

ದಾನಿ ಗಣೇಶ್ ನಾಯ್ಕ ಹೆಚ್ ಅವರು ಹೇಳಿದಿಷ್ಟು: ದೂರವಾಣಿ ಮುಖೇನಾ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಅವರು, "ನಾನು ಇದೇ ಶಾಲೆಯ ಹಳೇ ವಿದ್ಯಾರ್ಥಿ ಆಗಿದ್ದೇನೆ. ನಾನು ಓದಿದ ನಮ್ಮೂರು ಶಾಲೆಯ ದಾಖಲಾತಿ ಕಡಿಮೆ ಆಗುತ್ತಿದ್ದರಿಂದ ಅದನ್ನು ಹೆಚ್ಚಿಸುವ ಸಲುವಾಗಿ ಈ ಪ್ರಯತ್ನ ಮಾಡ್ತಿದ್ದೇವೆ. ತಮ್ಮ ತಂದೆ ಹನುಮ ನಾಯ್ಕ ಕಾರಭಾರಿ ಅವರ ಹೆಸರಿನಲ್ಲಿ ಐವತ್ತು ಸಾವಿರ ಹಣವನ್ನು ಕೊಡುತ್ತಿದ್ದೇನೆ. ಸರ್ಕಾರಿ ಶಾಲೆಗೆ ಬರುವ ಮಕ್ಕಳು ಇದ್ದಕ್ಕಿದ್ದಂತೆ ಖಾಸಗಿ ಶಾಲೆಯತ್ತ ಮುಖ ಮಾಡ್ತಿದ್ದು, ಈ ಪ್ರಯತ್ನಕ್ಕೆ ಕೈ ಹಾಕಿದ್ದೇವೆ'' ಎಂದರು.

ಇದನ್ನೂ ಓದಿ :ತಾವು ಕಲಿತ ಶಾಲೆಗೆ 10 ಲಕ್ಷ ರೂ ವೈಯಕ್ತಿಕ ದೇಣಿಗೆ ನೀಡಲು ಮುಂದಾದ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details