ನವದೆಹಲಿ: ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಮಿಲಿಯನ್ ಡಾಲರ್ ಲೀಗ್ ಎಂದೇ ಪ್ರಸಿದ್ಧಿ ಪಡೆದಿರುವ ಐಪಿಎಲ್‌ಗೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಆದರೇ ಆಟಗಾರನಾಗಿ ಅಲ್ಲ ಬದಲಿಗೆ ಅವರು ತಂಡದ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ವರದಿಗಳ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಲಿದ್ದಾರೆ ಎನ್ನಲಾಗಿದೆ. 2025ರ ಮೆಗಾ ಹರಾಜಿನ ಮೊದಲು ಕೋಚ್ ಪಾತ್ರಕ್ಕಾಗಿ ದೆಹಲಿ ಕ್ಯಾಪಿಟಲ್ಸ್ ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರನ್ನು ಸಂಪರ್ಕಿಸಿದೆ. ಕಳೆದ ತಿಂಗಳ ಆರಂಭದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರೊಂದಿಗಿನ ಏಳು ವರ್ಷಗಳ ಒಪ್ಪಂದವನ್ನು ಕೊನೆಗೊಳಿಸಿತ್ತು. ಸ್ಪೋರ್ಟ್‌ಸ್ಟಾರ್‌ನ ವರದಿಯ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ 3 ಸೀಸನ್‌ಗಳಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ ಮತ್ತು 2024ರಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದ್ದರಿಂದ ಈಗ ಫ್ರಾಂಚೈಸ್ ರಿಕಿ ಪಾಂಟಿಂಗ್ ಬದಲಿಗೆ ಯುವರಾಜ್ ಸಿಂಗ್ ಅವರನ್ನು ತಂಡಕ್ಕೆ ಕರೆತರಲು ನೋಡುತ್ತಿದೆ.
ಗುಜರಾತ್ ಟೈಟಾನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ ಮತ್ತು ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಐಪಿಎಲ್-2025 ಕ್ಕಿಂತ ಮೊದಲು ತಂಡವನ್ನು ತೊರೆಯಬಹುದು ಎಂದು ಹೇಳಿತ್ತು. ಯುವರಾಜ್ ಸಿಂಗ್ ಅವರನ್ನು ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಮಾಡಲು ಫ್ರಾಂಚೈಸಿ ಬಯಸಿದೆ. ಆದರೆ ಈಗ ಆಶಿಶ್ ನೆಹ್ರಾ ಮೊದಲಿನಂತೆಯೇ ಗುಜರಾತ್ ಟೈಟಾನ್ಸ್ ತಂಡದೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.