ಹೈದರಾಬಾದ್: ಟೀಂ ಇಂಡಿಯಾ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ವೈಟ್‌ವಾಶ್ ಆದ ಬೆನ್ನಲ್ಲೇ ಡಬ್ಲ್ಯೂಟಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ನಿಗದಿಯಂತೆ ಇನ್ನೂ ಏಳು ಟೆಸ್ಟ್ ಪಂದ್ಯಗಳನ್ನು ಆಡಬೇಕಿರುವ ಆಸ್ಟ್ರೇಲಿಯಾ ಶೇ.62.50 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಿದೆ. ಸದ್ಯ 58.33 ಅಂಕಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ 55.56 ಅಂಕಗಳೊಂದಿಗೆ ಮೂರನೇ ಸ್ಥಾನ ಮತ್ತು ಭಾರತ ವಿರುದ್ಧ ಟೆಸ್ಟ್ ಸರಣಿಯ ಗೆಲುವಿನೊಂದಿಗೆ ಕಿವೀಸ್ 54.55 ಅಂಕಗಳೊಂದಿಗೆ ನಾಲ್ಕನೇ ಸ್ಥಾನ, ಆ ನಂತರ ದಕ್ಷಿಣ ಆಫ್ರಿಕಾ 54.17 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.
ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಭಾರತ ಎಷ್ಟು ಪಂದ್ಯ ಗೆಲ್ಲಬೇಕು:ಟೀಂ ಇಂಡಿಯಾ ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನಾಡಲಿದೆ. ಇದು ಭಾರತಕ್ಕೆ ಕೊನೆಯ ಸರಣಿಯಾಗಿದೆ. ಈ ಸರಣಿಯಲ್ಲಿ ಭಾರತ ತಂಡವು 4 ಟೆಸ್ಟ್ ಗೆದ್ದು, ಒಂದನ್ನು ಡ್ರಾ ಮಾಡಿಕೊಂಡರೂ ಅಥವಾ ಒಂದು ಪಂದ್ಯವನ್ನು ಸೋತರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಲು ಕಷ್ಟವಾಗಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
92 ವರ್ಷಗಳ ಬಳಿಕ ತವರಿನಲ್ಲಿ ಟೀಂ ಇಂಡಿಯಾ ವೈಟ್‌ವಾಶ್:ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಭಾನುವಾರ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 25 ರನ್ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕಿವೀಸ್ ಕ್ಲೀನ್ ಸ್ವೀಪ್ ಮಾಡಿತು. ಇನ್ನೊಂದೆಡೆ, ಭಾರತ 92 ವರ್ಷಗಳ ನಂತರ ತವರಿನಲ್ಲಿ ನಡೆದ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳನ್ನು ಸೋತು ವೈಟ್‌ವಾಶ್ ಆಯಿತು.