ನವದೆಹಲಿ:ಬೆಂಗಳೂರಿನಲ್ಲಿ ಆರಂಭಗೊಂಡಮಹಿಳಾ ಪ್ರೀಮಿಯರ್ ಲೀಗ್ ಸೀಸನ್-2 ನಿನ್ನೆ ದೆಹಲಿಯಲ್ಲಿ ಮುಕ್ತಾಯಗೊಂಡಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದರ ಜೊತೆಗೆ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಪ್ರಶಸ್ತಿಯನ್ನೂ ಗೆದ್ದ ಆರ್ಸಿಬಿ, ಈ ಮೂರೂ ಪ್ರಶಸ್ತಿಗಳನ್ನು ಪಡೆದ ಮೊದಲ ತಂಡವಾಗಿ ಅಪರೂಪದ ಸಾಧನೆ ಮಾಡಿದೆ.
ಆರೆಂಜ್ ಕ್ಯಾಪ್: ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ತೋರಿದ ಆರ್ಸಿಬಿಯ ಎಲ್ಲಿಸ್ ಪೆರ್ರಿ 341 ರನ್ ಗಳಿಸಿದ್ದು, ಸೀಸನ್ನ ಅತ್ಯಧಿಕ ಸ್ಕೋರರ್ ಆಗಿ ಆರೆಂಜ್ ಕ್ಯಾಪ್ ಪ್ರಶಸ್ತಿ ಪಡೆದರು. ಇದರೊಂದಿಗೆ ಆಸ್ಟ್ರೇಲಿಯಾ ಆಟಗಾರ್ತಿಗೆ ಬಹುಮಾನವಾಗಿ 5 ಲಕ್ಷ ರೂಪಾಯಿ ನೀಡಲಾಯಿತು.
ಪರ್ಪಲ್ ಕ್ಯಾಪ್: ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆರ್ಸಿಬಿಯ ಶ್ರೇಯಾಂಕಾ ಪಾಟೀಲ್ ಪರ್ಪಲ್ ಕ್ಯಾಪ್ ಪಡೆದರು. ಅಂತಿಮ ಪಂದ್ಯದಲ್ಲಿ ಶ್ರೇಯಾಂಕಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 13 ವಿಕೆಟ್ ಉರುಳಿಸಿದ ಅವರು ಪರ್ಪಲ್ ಕ್ಯಾಪ್ ಪ್ರಶಸ್ತಿಯೊಂದಿಗೆ 5 ಲಕ್ಷ ಬಹುಮಾನ ಪಡೆದರು.
ಉದಯೋನ್ಮುಖ ಆಟಗಾರ್ತಿ:ಋತುವಿನ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಕೂಡ ಶ್ರೇಯಾಂಕಾ ಪಾಟೀಲ್ ಪಾಲಾಯಿತು. ಈ ಪ್ರಶಸ್ತಿಯೊಂದಿಗೆ 5 ಲಕ್ಷ ಬಹುಮಾನವಾಗಿ ನೀಡಲಾಯಿತು.
ಬೆಸ್ಟ್ ಸ್ಟ್ರೈಕ್ ರೇಟ್ ಪ್ರಶಸ್ತಿ: ಆರ್ಸಿಬಿ ಆಟಗಾರ್ತಿ ಜಾರ್ಜಿಯಾ ವೇರ್ ಹ್ಯಾಮ್ ಅವರಿಗೆ 5 ಲಕ್ಷ ರೂ. ಬಹುಮಾನದೊಂದಿಗೆ ಸರಣಿಯ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ ನೀಡಲಾಯಿತು.
ಫೇರ್ ಪ್ಲೇ ಪ್ರಶಸ್ತಿ:ಸರಣಿಯುದ್ದಕ್ಕೂ ಅದ್ಬುತ ಪ್ರದರ್ಶನ ತೋರಿದ ಬೆಂಗಳೂರು ತಂಡಕ್ಕೆ ಫೇರ್ ಪ್ಲೇ ಪ್ರಶಸ್ತಿಯೊಂದಿಗೆ 5 ಲಕ್ಷ ರೂ ಬಹುಮಾನ ಒಲಿದುಬಂತು.