ಬಳ್ಳಾರಿ: "ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು" ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆಗ್ರಹಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬೀದರ್ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ತುಂಬಾ ಗಂಭೀರವಾಗಿದೆ. ಈ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕಿತ್ತು, ಇಲ್ಲದಿದ್ದರೆ ಸಿಎಂ ಆದ್ರೂ ರಾಜೀನಾಮೆ ಪಡೆದುಕೊಳ್ಳಬೇಕಿತ್ತು. ಆದರೆ ಅವರು ಆ ಧೈರ್ಯ ಮಾಡಲಿಲ್ಲ" ಎಂದು ಹೇಳಿದರು.
"ಪ್ರಿಯಾಂಕ್ ಖರ್ಗೆಗೆ ತಂದೆ ಎಐಸಿಸಿ ಅಧ್ಯಕ್ಷರಿದ್ದಾರೆ ಅನ್ನೋ ಸೊಕ್ಕು, ದುರಹಂಕಾರ ಇದೆ. ಮಲ್ಲಿಕಾರ್ಜುನ ಖರ್ಗೆಯವರು ಮನಸ್ಸು ಮಾಡಿದ್ದರೆ ಸಿಎಂ ಸ್ಥಾನವನ್ನು ಕಿತ್ತುಕೊಳ್ಳಬಹುದು ಎನ್ನುವ ಧೈರ್ಯ ಪ್ರಿಯಾಂಕ್ ಖರ್ಗೆಗೆ ಇದೆ. ಹೀಗಾಗಿ ಬಿಜೆಪಿಯವರು ಬಟ್ಟೆ ಹರಿದುಕೊಂಡ್ರೂ ತಾನು ರಾಜೀನಾಮೆ ನೀಡಲ್ಲ ಎಂದು ಸೊಕ್ಕಿನ ಮಾತುಗಳನ್ನಾಡಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಸಚಿನ್ 7 ಡೆತ್ನೋಟ್ ಬರೆದಿದ್ದಾರೆ: "ಸಚಿನ್ ಕುಟುಂಬದ ಜೊತೆ ಬಿಜೆಪಿ ಇದೆ. ಇಡೀ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಸಚಿನ್ 7 ಡೆತ್ನೋಟ್ ಬರೆದಿದ್ದಾರೆ. ಡೆತ್ನೋಟ್ನಲ್ಲಿ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಅವರ ಹೆಸರನ್ನ ಬರೆದಿದ್ದಾರೆ. ಡೆತ್ನೋಟ್ ಬಗ್ಗೆ ಪ್ರಿಯಾಂಕ್ ಖರ್ಗೆ, ಗೃಹ ಸಚಿವರು, ಡಿಸಿಎಂ ಬಹಳ ಹಗುರವಾಗಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಯಾವ ರೀತಿ ಪಾಠ ಕಲಿಸ್ತಾರೆ ಅನ್ನೋದು ಗೊತ್ತಾಗಲಿದೆ" ಎಂದು ಹೇಳಿದರು.
"ಚಂದ್ರಶೇಖರ ಆತ್ಮಹತ್ಯೆಯಿಂದ ವಾಲ್ಮೀಕಿ ಹಗರಣ ಹೊರಗಡೆ ಬಂತು. ಇದೀಗ ಓರ್ವ ಗುತ್ತಿಗೆದಾರ ಡೆತ್ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ರೂ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದಿಲ್ಲ. ಸಚಿವೆ ಲಕ್ಚ್ಮೀ ಹೆಬ್ಬಾಳ್ಕರ್ ಅವರ ಪಿಎ ಹೆಸರು ಬರೆದು ಓರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೀತಿ ಸಾಕಷ್ಟು ಜನರು, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದಲಿಂಗ ಸ್ವಾಮೀಜಿ, ಮಣಿಕಂಠ ರಾಠೋಡ್, ಚಂದು ಪಾಟೀಲ್, ಬಸವರಾಜ್ ಮತ್ತಿಮಡ್ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ. ಇದೆಲ್ಲ ಸಚಿನ್ ಬರೆದಿರುವ ಡೆತ್ನೋಟ್ನಲ್ಲಿ ಉಲ್ಲೇಖ ಆಗಿದೆ" ಎಂದರು.
"ಸಿ.ಟಿ. ರವಿ ವಿಚಾರದಲ್ಲಿ ಪೊಲೀಸರು ಉಗ್ರಗಾಮಿಗಳ ರೀತಿ ನಡೆಸಿಕೊಂಡಿದ್ರು. ಮುನಿರತ್ನ ವಿಚಾರದಲ್ಲೂ ಹಾಗೇ ಆಗಿದೆ. ಶಾಸಕರು, ಗುತ್ತಿಗೆದಾರರು, ಅಧಿಕಾರಿಗಳಿಗೆ ಇಷ್ಟೆಲ್ಲಾ ಆಗುತ್ತಿದೆ. ಈ ಹಿಂದೆ ಈಶ್ವರಪ್ಪ ಅವರ ರಾಜೀನಾಮೆ ತಗೊಂಡ್ರು. ಗಣಪತಿ ವಿಚಾರದಲ್ಲಿ ಕೆ.ಜೆ. ಜಾರ್ಜ್ ರಾಜೀನಾಮೆ ಕೊಟ್ಟಿದ್ರು. ಸಾಮಾಜಿಕ ಜಾಲತಾಣದಲ್ಲಿ ಸಚಿನ್ ಪೋಸ್ಟ್ ಹಾಕಿದ್ದರು. ಈ ವಿಚಾರದಲ್ಲಿ ಸಹೋದರಿಯರು ಠಾಣೆಗೆ ಹೋಗಿ ದೂರು ಕೊಟ್ರೂ ಪೊಲೀಸರು ದೂರು ಸ್ವೀಕರಿಸಿರಲಿಲ್ಲ" ಎಂದು ದೂರಿದರು.
"ಪೊಲೀಸರು ದೂರು ದಾಖಲಿಸಿಕೊಂಡು ಪ್ರಯತ್ನಿಸಿದ್ರೆ ಸಚಿನ್ ಬಹುಶ ಬದುಕುಳಿಯುತ್ತಿದ್ದ. ಅವರ ಸಹೋದರಿಯರ ಬಗ್ಗೆಯೇ ಪೊಲೀಸರು ಕೆಟ್ಟದಾಗಿ ಮಾತನಾಡಿ ಕಳಿಸಿದ್ದಾರೆ. ಬೀದರ್, ಕಲಬುರಗಿ ಜಿಲ್ಲೆಯ ಪೊಲೀಸ್ ಠಾಣೆಗಳೆಲ್ಲಾ ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ ಎಂದು ಜನ ಮಾತನಾಡ್ತಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಪ್ರಕರಣ ಸಿಐಡಿಗೆ ವಹಿಸಲಾಗಿದೆ: ಗೃಹ ಸಚಿವ ಪರಮೇಶ್ವರ್