ಪ್ಯಾರಿಸ್:ಭಾರತೀಯರ ಕೊನೆಯ ಆಸೆಯೂ ಇಂದು ಕಮರಿತು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅನರ್ಹತೆಗೆ ಒಳಗಾಗಿದ್ದ ಕುಸ್ತಿಪಟು ವಿನೇಶ್ ಪೋಗಟ್ ಕ್ರೀಡಾ ಮಧ್ಯಸ್ಥಿಕೆ ಕೋರ್ಟ್ನಲ್ಲೂ ಹಿನ್ನಡೆ ಅನುಭವಿಸಿದ್ದಾರೆ. ತಮ್ಮನ್ನು ಅನರ್ಹಗೊಳಿಸಿದ್ದ ಕ್ರಮವನ್ನು ವಿರೋಧಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಬೆಳ್ಳಿ ಪದಕದ ನಿರೀಕ್ಷೆಯಲ್ಲಿದ್ದ ಕುಸ್ತಿಪಟು ಮತ್ತು ಭಾರತೀಯರಿಗೆ ತೀವ್ರ ನಿರಾಸೆ ಉಂಟಾಗಿದೆ.
ವಿನೇಶ್ ಫೋಗಟ್ ಅವರ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಎರಡು ಬಾರಿ ತೀರ್ಪನ್ನು ಮುಂದೂಡಿತ್ತು. ಕೊನೆಗೂ, ಬುಧವಾರ ರಾತ್ರಿ ಆದೇಶ ಹೊರಡಿಸಿದ್ದು, ಫೋಗಟ್ ಮನವಿಯನ್ನು ನಿರಾಕರಿಸಿದೆ. ಜೊತೆಗೆ, ಕ್ರೀಡಾ ನಿಯಮಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದೆ. ಕ್ರೀಡಾಪಟುಗಳ ಶಾರೀರಿಕ ಮತ್ತು ಮಾನಸಿಕ ಒತ್ತಡಗಳನ್ನು ಪರಿಗಣಿಸಿ ನಿಯಮ ರೂಪಿಸಿ ಎಂದು ಸಲಹೆ ನೀಡಿದೆ.
ತೀರ್ಪು ನಿರಾಸೆ ತಂದಿದೆ:ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಮುಖ್ಯಸ್ಥೆ ಪಿ.ಟಿ.ಉಷಾ, ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW) ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿದ ಸಿಎಎಸ್ ಆದೇಶವು ಅಚ್ಚರಿ ಮತ್ತು ನಿರಾಸೆ ತಂದಿದೆ. ಇದು ಕ್ರೀಡಾಪಟುವಿನ ಆತ್ಮಸ್ಥೈರ್ಯವನ್ನೇ ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ.