ನಾಗ್ಪುರ:ಯಾವುದೇ ಅಂತಾರಾಷ್ಟ್ರೀಯ ಪಂದ್ಯಕ್ಕೆ ಕಡಿಮೆ ಇಲ್ಲದಂತೆ ಜಿದ್ದಾಜಿದ್ದಿನಿಂದ ಕೂಡಿದ್ದ ರಣಜಿ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ವಿದರ್ಭ 62 ರನ್ಗಳಿಂದ ಗೆಲುವು ಸಾಧಿಸುವ ಮೂಲಕ ಮೂರನೇ ಬಾರಿಗೆ ಫೈನಲ್ ತಲುಪಿತು. ಮಾರ್ಚ್ 10 ರಂದು ಟ್ರೋಫಿಗಾಗಿ ನಡೆಯುವ ಕದನದಲ್ಲಿ 41 ಬಾರಿಯ ಚಾಂಪಿಯನ್ ಮುಂಬೈ ವಿರುದ್ಧ ಸೆಣಸಾಡಲಿದೆ.
ನಾಲ್ಕನೇ ದಿನದಂತ್ಯಕ್ಕೆ 6 ವಿಕೆಟ್ಗೆ 228 ರನ್ ಗಳಿಸಿದ್ದ ಮಧ್ಯಪ್ರದೇಶ ಕೊನೆಯ ದಿನದಲ್ಲಿ 93 ರನ್ ಗಳಿಸಬೇಕಿತ್ತು. ಮೊದಲ ಅವಧಿಯಲ್ಲೇ ಪಾರಮ್ಯ ಮೆರೆದ ವಿದರ್ಭ 31 ರನ್ ಬಿಟ್ಟುಕೊಟ್ಟು ಕೊನೆಯ 4 ವಿಕೆಟ್ಗಳನ್ನು ಕೆಡವಿ 258 ರನ್ಗೆ ಆಲೌಟ್ ಮಾಡಿತು. ಆದಿತ್ಯ ಠಾಕರೆ ಮತ್ತು ಯಶ್ ಠಾಕೂರ್ ತಲಾ 2 ವಿಕೆಟ್ ಪಡೆದು, ಮೂರನೇ ಬಾರಿಗೆ ಫೈನಲ್ ತಲುಪುವ ಮಧ್ಯಪ್ರದೇಶದ ಆಸೆಗೆ ತಣ್ಣೀರೆರಚಿದರು.
ಗೆಲುವಿಗೆ 321 ರನ್‌ಗಳ ಗುರಿಯನ್ನು ಬೆನ್ನಟ್ಟಿದ 2021-22 ರ ಚಾಂಪಿಯನ್ ಮಧ್ಯಪ್ರದೇಶಕ್ಕೆ ಯಶ್ ದುಬೆ ಮತ್ತು ಹರ್ಷ ಗವ್ಲಿ ನೆರವಾದರು. ಆರಂಭಿಕ ಆಟಗಾರ ಯಶ್ ಶಾಂತವಾಗಿ ಆಡಿ 94 ರನ್ ಗಳಿಸಿದರು. ನಾಲ್ಕನೇ ದಿನದಾಟ ಮುಗಿಯಲು 1 ಓವರ್ ಬಾಕಿ ಇರುವಾಗ ಔಟಾಗಿದ್ದು ತಂಡಕ್ಕೆ ಭಾರೀ ಹೊಡೆತ ನೀಡಿತು. ಇತ್ತ ಹರ್ಷ್ 67 ರನ್ ಗಳಿಸಿ ಯಶ್ ಠಾಕೂರ್ಗೆ ವಿಕೆಟ್ ನೀಡಿದರು.
ಅಂತಿಮ ದಿನದಾಟದ ಮ್ಯಾಜಿಕ್:16 ರನ್ ಗಳಿಸಿ ಅಂತಿಮ ದಿನದಾಟದಲ್ಲಿ ವಿಕೆಟ್ ಕಾಯ್ದುಕೊಂಡಿದ್ದ ಸಾರಾಂಶ ಜೈನ್, ನೈಟ್ ವಾಚ್ಮನ್ ಕುಮಾರ್ ಕಾರ್ತಿಕೇಯ(0) ಜೊತೆ ಇನಿಂಗ್ಸ್ ಆರಂಭಿಸಿದರು. ಹೊಸ ಚೆಂಡಿನೊಂದಿಗೆ ದಾಳಿಗಿಳಿದ ಆದಿತ್ಯ ಠಾಕರೆ ಕಾರ್ತಿಕೇಯರ ವಿಕೆಟ್ ಪಡೆದು ಮೊದಲ ಸಂಭ್ರಮ ನೀಡಿದರು. ಇದರ ಬೆನ್ನಲ್ಲೇ ಅನುಭವ್ ಅಗರ್ವಾಲ್ ಕೂಡ ಸೊನ್ನೆ ಸುತ್ತಿದರು. ಇದರಿಂದ ತಂಡ 234 ರನ್ಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹೊತ್ತಿನಲ್ಲೇ ಸಾರಾಂಶ ಜೈನ್ 25 ರನ್ಗೆ ವಿಕೆಟ್ ನೀಡಿದರು. ಆವೇಶ್ ಖಾನ್ (8), ಕುಲ್ವಂತ್(11) ತುಸು ಹೊತ್ತು ಬ್ಯಾಟ್ ಮಾಡಿ ಕೊನೆಗೆ ವಿಕೆಟ್ ನೀಡಿದರು.
ಮೂರನೇ ಪ್ರಶಸ್ತಿ ಮೇಲೆ ವಿದರ್ಭ ಕಣ್ಣು:ವಿದರ್ಭ ರಣಜಿ ಇತಿಹಾಸದಲ್ಲಿ 3ನೇ ಬಾರಿಗೆ ಫೈನಲ್ ತಲುಪಿದೆ. ಈವರೆಗೂ ಆಡಿದ ಎರಡೂ ಫೈನಲ್ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಆಗಿದೆ. 2017-18 ರಲ್ಲಿ ದೆಹಲಿ ಮತ್ತು 2018-19 ರಲ್ಲಿ ಸೌರಾಷ್ಟ್ರವನ್ನು ಸೋಲಿಸಿ ಪ್ರಶಸ್ತಿ ಗೆದ್ದಿದೆ. ಮಾರ್ಚ್ 10 ರಂದು ನಡೆಯುವ ಅಂತಿಮ ಪಂದ್ಯದಲ್ಲಿ 41 ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಸೋಲಿಸಿ ಮೂರನೇ ಟ್ರೋಫಿ ಎತ್ತಿಹಿಡಿಯಲು ಕಾದಿದೆ.
ಸಂಕ್ಷಿಪ್ತ ಸ್ಕೋರ್:ವಿದರ್ಭ 170 & 402, ಮಧ್ಯಪ್ರದೇಶ 252 ಮತ್ತು 258
ಇದನ್ನೂ ಓದಿ:ರಣಜಿ: ತಮಿಳುನಾಡಿಗೆ ಇನಿಂಗ್ಸ್ & 70 ರನ್ ಸೋಲು, 48ನೇ ಸಲ ಫೈನಲ್ಗೇರಿದ ಮುಂಬೈ