ಬಾರಾಬಂಕಿ(ಉತ್ತರಪ್ರದೇಶ):ಕುನ್ವರ್ ದಿಗ್ವಿಜಯ್ ಸಿಂಗ್ (ಕೆ.ಡಿ.ಸಿಂಗ್). ಇದು ಭಾರತದ ಹಾಕಿ ಇತಿಹಾಸದಲ್ಲಿ ಅಚ್ಚಳಿಯದ ಹೆಸರು. ಒಲಿಂಪಿಕ್ಸ್ನಲ್ಲಿ 2 ಬಾರಿ ಚಿನ್ನದ ಪದಕ ಗೆದ್ದ ತಂಡದ ಮುಖ್ಯ ಫಾರ್ವರ್ಡ್ ಆಟಗಾರರಾಗಿದ್ದ ಸಿಂಗ್ ಅವರ ಬಾಲ್ಯದ ಮನೆ ಈಗ ಹರಾಜಿಗೆ ಬಂದಿದೆ. ಸಹೋದರರ ಆಸ್ತಿ ಹಂಚಿಕೆ ಕಿತ್ತಾಟದಲ್ಲಿ ಮಾರ್ಚ್ 11ರಂದು ಮನೆಯನ್ನು ಮಾರಾಟ ಮಾಡಲಾಗುತ್ತಿದೆ. ಆದರೆ, ಇದನ್ನು ಸರ್ಕಾರವೇ ಖರೀದಿಸಿ ವಸ್ತುಸಂಗ್ರಹಾಲಯ ಮಾಡಬೇಕು ಎಂಬುದು ಅಭಿಮಾನಿಗಳ ಆಶಯ.
35 ಸಾವಿರದ 241 ಚದರ ಅಡಿ ವಿಸ್ತೀರ್ಣದ ಮನೆ ಇದಾಗಿದ್ದು, ಕೆ.ಡಿ.ಸಿಂಗ್‌ರ ಆರು ಮಂದಿ ಸಹೋದರ ಮಧ್ಯೆ ಆಸ್ತಿ ಹಂಚಿಕೆ ವಿವಾದವಿದೆ. 2009ರಲ್ಲಿ ಸ್ಥಳೀಯ ನ್ಯಾಯಾಲಯವು ಮಹಲನ್ನು ಮಾರಾಟ ಮಾಡಿ ಬಂದ ಹಣದಲ್ಲಿ ವಾರಸುದಾರರಿಗೆ ಸಮಾನ ಹಂಚಿಕೆ ಮಾಡಲು ಆದೇಶಿಸಿದೆ.
ಹಲವು ಕಾರಣಗಳಿಗೆ ಮನೆಯ ಮಾರಾಟ ಮುಂದೂಡುತ್ತಲೇ ಬರಲಾಗಿದೆ. ಇದೀಗ ಫೆಬ್ರವರಿ 16ರಂದು ಹೆಚ್ಚುವರಿ ಸಿವಿಲ್ ಕೋರ್ಟ್, ಈ ಮನೆಯನ್ನು ಮಾರ್ಚ್ 11ರಂದು ಹರಾಜು ಮಾಡಲು ಸೂಚಿಸಿದೆ. ನ್ಯಾಯಾಲಯದ ಆದೇಶದ ಮೇರೆಗೆ ಸಾರ್ವಜನಿಕ ಹರಾಜಿನ ನೋಟಿಸ್ ಮನೆಗೆ ಅಂಟಿಸಲಾಗಿದೆ. ಅಂದು ಮಧ್ಯಾಹ್ನ 2.30ಕ್ಕೆ ಸಿವಿಲ್ ಕೋರ್ಟ್ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಆಸ್ತಿಯ ಮೂಲ ಮಾರಾಟದ ಮೊತ್ತ 5 ಕೋಟಿ ರೂಪಾಯಿ ಆಗಿದೆ. ಮಹಲನ್ನು ಖರೀದಿ ಮಾಡುವ ಆಸಕ್ತರು ಅಂದಿನ ಬಿಡ್ನಲ್ಲಿ ಭಾಗವಹಿಸಬಹುದು.
ಮ್ಯೂಸಿಯಂ ಮಾಡಲು ಒತ್ತಾಯ:ಕ್ರೀಡಾ ತಾರೆಯ ಬಾಲ್ಯದ ಮಹಲನ್ನು ಹರಾಜು ಮಾಡುವ ಬದಲು ಸರ್ಕಾರವೇ ಖರೀದಿ ಮಾಡಿ, ಅದನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬಿಜೆಪಿ ಮುಖಂಡರು ಸೇರಿ ಸಾರ್ವಜನಿಕರು ಪತ್ರ ಬರೆದಿದ್ದಾರೆ. ದೇಶದ ಕೀರ್ತಿಯನ್ನು ಬೆಳಗಿದ ಆಟಗಾರನಿಗೆ ಗೌರವ ಸಲ್ಲಿಸುವ ಭಾಗವಾಗಿ ಮನೆಯನ್ನು ಮ್ಯೂಸಿಯಂ ಆಗಿ ಬಳಸಿಕೊಳ್ಳಬೇಕು ಜನರು ಆಗ್ರಹಿಸಿದ್ದಾರೆ.