ಬಾರ್ಬಡೋಸ್:ತಂಡದಲ್ಲಿ ಎಲ್ಲರೂ ಒಟ್ಟಾಗಿ ಸೇರಿಕೊಂಡು ಏನಾದರೂ ವಿಶೇಷವಾದುದನ್ನು ಸಾಧಿಸುವ ಉತ್ಸಾಹ ಹೊಂದಿದ್ದಾರೆ. ಇದು ಟಿ20 ವಿಶ್ವಕಪ್ ಪಂದ್ಯಾವಳಿಯ ಎರಡನೇ ಹಂತವನ್ನು ಪ್ರಾರಂಭಿಸಲು ಉತ್ತಮ ಮಾರ್ಗ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.
ಟಿ20 ವಿಶ್ವಕಪ್ ಟೂರ್ನಿಯ 1 ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್-8 ಹಂತಕ್ಕೇರಿರುವ ಭಾರತ ತಂಡವು ಅಫ್ಘಾನಿಸ್ತಾನದ ವಿರುದ್ಧದ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸಿದೆ. ಈ ಹಿಂದಿನ ಐರ್ಲೆಂಡ್ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಇದಕ್ಕೂ ಮುನ್ನ ಪಾಕಿಸ್ತಾನ ಮತ್ತು ಯುಎಸ್ ವಿರುದ್ಧ ಭಾರತವು ಪೈಪೋಟಿಯ ನಡುವೆಯೂ ಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಕೆನಡಾ ಜೊತೆಗಿನ ಮುಖಾಮುಖಿಯಲ್ಲಿ ಸರಾಗವಾಗಿ ಜಯ ದಾಖಲಿಸಿತ್ತು. ಇದೀಗ ಸೂಪರ್-8ರಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ಜೊತೆ ಗುಂಪು 1ರಲ್ಲಿ ಭಾರತ ತಂಡ ಸೆಣಸಲಿದ್ದು, ಸೆಮಿಫೈನಲ್ ತಲುಪಲು ಗೆಲುವು ಅಗತ್ಯವಾಗಿದೆ.
ಪಂದ್ಯದ ಅಭ್ಯಾಸದ ವೇಳೆ ಬಿಸಿಸಿಐ ಜೊತೆ ಮಾತನಾಡಿರುವ ರೋಹಿತ್, "ಪ್ರತಿಯೊಬ್ಬರೂ ತಂಡದಲ್ಲಿ ಬದಲಾವಣೆ ಮೂಡಿಸಲು ಬಯಸುತ್ತಾರೆ. ನಮ್ಮ ಕೌಶಲ್ಯಾವಧಿಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರತಿಯೊಂದು ಅವಧಿಗಳಲ್ಲೂ ಸಾಧಿಸಲು ಏನಾದರೊಂದು ವಿಷಯ ಇರುತ್ತದೆ. ಮುಂದಿನ ಹಂತದಲ್ಲಿ ನಾವು ಮೊದಲ ಪಂದ್ಯವಾಡಿದ ಬಳಿಕ, ಮುಂದಿನ ಎರಡು ಪಂದ್ಯಗಳನ್ನು ಕೂಡ ಮೂರು - ನಾಲ್ಕು ದಿನಗಳಲ್ಲೇ ಆಡುತ್ತಿದ್ದೇವೆ'' ಎಂದು ಹೇಳಿದರು.