ಹೈದರಾಬಾದ್: ಭಾರತದ ಸ್ಟಾರ್ ಶಟ್ಲರ್ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಿದ್ಧವಾಗಿದ್ದಾರೆ. 29 ವರ್ಷದ ಸಿಂಧು ಅವರು ಹೈದರಾಬಾದ್ನ ಪೊಸಿಡೆಕ್ಸ್ ಟೆಕ್ನಾಲಜೀಸ್ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ದತ್ತ ಸಾಯಿ ಅವರೊಂದಿಗೆ ಇದೇ ತಿಂಗಳ 22 ರಂದು ಹಸೆಮಣೆ ಏರಲಿದ್ದಾರೆ.
ರಾಜಾಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹ ಸಮಾರಂಭ ನಡೆಯಲಿದ್ದು, ಡಿ.20ರಂದು ವಿವಾಹ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ಡಿ.24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಸಿಂಧು ಅವರ ಕುಟುಂಬ ಖಚಿತಪಡಿಸಿದೆ.
"ಎರಡೂ ಮನೆಯವರು ಬಹಳ ಹಿಂದಿನಿಂದಲೂ ಪರಿಚಿತರು. ಆದರೆ ನಾವು ಈ ಮದುವೆಯನ್ನು ಒಂದು ತಿಂಗಳ ಹಿಂದೆಯಷ್ಟೇ ಖಚಿತಪಡಿಸಿದ್ದೇವೆ. ಸಿಂಧು ಜನವರಿಯಿಂದ ಸತತ ಟೂರ್ನಿಗಳನ್ನು ಆಡಲಿದ್ದಾರೆ. ಅವರ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ನಾವು ಡಿಸೆಂಬರ್ 22 ರಂದು ವಿವಾಹ ಸಮಾರಂಭ ನಿಗದಿಪಡಿಸಿದ್ದೇವೆ. 24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜನವರಿಯಲ್ಲಿ ಸಿಂಧು ಅವರು ಬ್ಯಾಡ್ಮಿಂಟನ್ ಅಂಗಳಕ್ಕೆ ಮರಳಲು ಸಾಧ್ಯವಾಗುವ ರೀತಿಯಲ್ಲಿ ಮದುವೆ ವೇಳಾಪಟ್ಟಿಯನ್ನು ನಿರ್ಧರಿಸಲಾಗಿದೆ. ಯಾಕೆಂದರೆ ಮುಂದಿನ ಟೂರ್ನಮೆಂಟ್ ಆಕೆಗೆ ಬಹಳ ಮುಖ್ಯವಾಗಿದೆ" ಎಂದು ಸಿಂಧು ಅವರ ತಂದೆ ಪಿವಿ ರಮಣ ಇತ್ತೀಚೆಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ತಿರುಪತಿ ದೇಗುಲದ ದರ್ಶನ ಪಡೆದ ನಟಿ ಕೀರ್ತಿ ಸುರೇಶ್: ಮದುವೆ ಬಗ್ಗೆ ಹೇಳಿದ್ದೇನು? ವಿಡಿಯೋ ನೋಡಿ