ಉಡುಪಿ: ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಜಿಲ್ಲೆಯ ಕೆಲವೆಡೆ ವ್ಯಾಪಕ ಮಳೆ ಮುಂದುವರೆದಿದೆ. ಉಡುಪಿ ನಗರದ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದ್ದು, ಪಾದಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸಿದರು.
ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆ ಮಳೆ ಆರಂಭವಾಯಿತು. ರಾತ್ರಿ ಗಾಳಿಯೊಂದಿಗೆ ಗುಡುಗುಸಹಿತ ಭಾರೀ ಮಳೆ ಮುಂದುವರೆದಿದೆ. ಹೀಗಾಗಿ, ಜಿಲ್ಲೆಯ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಎಲ್ಲೆಲ್ಲಿ ಮಳೆ?: ಕಾಪು, ಪಡುಬಿದ್ರಿ, ಕಾರ್ಕಳ, ಉಡುಪಿ, ಬ್ರಹ್ಮಾವರದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆಯಾಗಿದೆ.
ಇಂದು ಶಾಲೆಗಳಿಗೆ ರಜೆ, ಆರೆಂಜ್ ಅಲರ್ಟ್ ಘೋಷಣೆ: ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಹವಾಮಾನ ಇಲಾಖೆ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿದೆ. ಈಗಾಗಲೇ ಮೀನುಗಾರಿಕೆಗೆ ತೆರಳಿರುವವರಿಗೆ ವಾಪಸ್ ಬರುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅವರು ಹಿಂದೆ ಸರಿದಿದ್ದಾರೆ.
ಮಕ್ಕಳು ಹಾಗೂ ಸಾರ್ವಜನಿಕರು ಅಪಾಯಕಾರಿ ನದಿ, ನೀರಿರುವ ಪ್ರದೇಶ, ಅಪಾಯಕಾರಿ ವಿದ್ಯುತ್ ಕಂಬದ ಹತ್ತಿರ ಸುಳಿಯಬಾರದು. ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರಬೇಕು. ದುರ್ಬಲ/ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ/ಮರಗಳ ಕೆಳಗೆ ನಿಲ್ಲಬಾರದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ತುರ್ತು ಸೇವೆಗೆ ಸಹಾಯವಾಣಿ: ಸಾರ್ವಜನಿಕರು ತಗ್ಗು ಪ್ರದೇಶದಲ್ಲಿ ಅಥವಾ ಮಳೆಯಿಂದ ಅಪಾಯಕ್ಕೀಡಾಗುವ ಪ್ರದೇಶದಲ್ಲಿ ವಾಸವಿದ್ದಲ್ಲಿ ಅಥವಾ ಶಿಥಿಲಾವಸ್ಥೆಯಿಂದ ಜಾರುವ ಹಂತದಲ್ಲಿರುವ ಕಾಂಪೌಂಡ್ ಅಥವಾ ಮನೆ ಗೋಡೆ, ದುರ್ಬಲ ಕಟ್ಟಡದಲ್ಲಿ ವಾಸವಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಅಗತ್ಯವಿದ್ದಲ್ಲಿ ಈಗಾಗಲೇ ಸಂಬಂಧಿಸಿದ ತಹಶೀಲ್ದಾರ್‌ರಿಂದ ಗುರುತಿಸಲ್ಪಟ್ಟ ಕಾಳಜಿ ಕೇಂದ್ರದಲ್ಲಿ ಕಡ್ಡಾಯವಾಗಿ ಆಶ್ರಯ ಪಡೆದುಕೊಳ್ಳಬೇಕು. ಸಾರ್ವಜನಿಕರು ಶಿಥಿಲಾವಸ್ಥೆಯಲ್ಲಿರುವ ಅಥವಾ ಕುಸಿತದ ಹಂತದ ಕಾಂಪೌಂಡ್ ಅಥವಾ ಮನೆಯ ಗೋಡೆ ಕಂಡುಬಂದಲ್ಲಿ ತುರ್ತುಸೇವೆಗೆ ಶುಲ್ಕರಹಿತ 1077, ದೂ.ಸಂಖ್ಯೆ: 0820-2574802 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಲ್ಲಿ ಕೇಂದ್ರೀಕೃತವಾದ ಫೆಂಗಲ್ ಚಂಡಮಾರುತ: ಸಂಜೆವರೆಗೂ ಸುರಿಯಲಿದೆ ಭಾರಿ ಮಳೆ