ಬೆಳಗಾವಿ: ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಮೀನಾಕ್ಷಿ ಪುಂಡಲೀಕ ದಾವನೆ ಎಂಬ ವಿದ್ಯಾರ್ಥಿನಿ ಎಂಎ ರಾಜಕೀಯ ಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದರು. ಈ ವೇಳೆ ಅವರ ತಂದೆ-ತಾಯಿ ಸಂತಸಕ್ಕೆ ಪಾರವೇ ಇರಲಿಲ್ಲ.
ಮೀನಾಕ್ಷಿ ಚಿಕ್ಕೋಡಿ ತಾಲೂಕಿನ ಕುಟಾಳಿ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ. ತಂದೆ ಪುಂಡಲೀಕ, ತಾಯಿ ಅನಿತಾ ಇಬ್ಬರು ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಪುಂಡಲೀಕ ಮತ್ತು ಅನಿತಾ ದಂಪತಿಗೆ ಐವರು ಮಕ್ಕಳು. ಮೊದಲ ಪುತ್ರಿ ಅಮೃತಾ, ಚಿಕ್ಕೋಡಿ ಸಿವಿಲ್ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರಿ ಮಾಡುತ್ತಿದ್ದರೆ, ಎರಡನೇ ಪುತ್ರ ಅಮರ ಸ್ವಗ್ರಾಮ ಕುಟಾಳಿಯಲ್ಲಿ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಲ್ಕನೇ ಪುತ್ರಿ ಸುಮಿತ್ರಾ ಎಂಎ ಬಿಇಡಿ ಪದವಿ ಪಡೆದಿದ್ದು, ಸರ್ಕಾರಿ ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ. ಇನ್ನು ಕೊನೆಯ ಪುತ್ರ ಭೀಮರಾವ ಬಿಇ ಸಿವಿಲ್ ಮುಗಿಸಿದ್ದು ಬೆಂಗಳೂರಿನ ಎಟಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರನೇ ಪುತ್ರಿ ಮೀನಾಕ್ಷಿ ಎಂಎ ರಾಜಕೀಯ ಶಾಸ್ತ್ರದಲ್ಲಿ ಈಗ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಹುಟ್ಟಿದರೆ ಇಂಥ ಮಕ್ಕಳು ಹುಟ್ಟಬೇಕು ಎನ್ನುವಂತೆ ಸಾಧನೆಗೈಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಇದೇ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಚಿನ್ನದ ಹುಡುಗಿ ಮೀನಾಕ್ಷಿ, ತುಂಬಾ ಖುಷಿ ಆಗುತ್ತಿದೆ. ನನ್ನ ಈ ಸಾಧನೆ ಹಿಂದೆ ನನ್ನ ತಂದೆ-ತಾಯಿ ಪರಿಶ್ರಮ ಮತ್ತು ಸಹಕಾರವಿದೆ. ವಿ.ವಿ. ಉಪನ್ಯಾಸಕರು ಒಳ್ಳೆಯ ರೀತಿ ಪ್ರೋತ್ಸಾಹಿಸಿದರು. ಹಾಸ್ಟೆಲ್ನಲ್ಲಿ ಇದ್ದಿದ್ದರಿಂದ ಓದೋಕೆ ಸಾಕಷ್ಟು ಸಮಯಾವಕಾಶ ಸಿಕ್ಕಿತು. ಮಗಳು ಏನಾದರೂ ಸಾಧನೆ ಮಾಡಿಯೇ ಊರಿಗೆ ಬರುತ್ತಾಳೆ ಎಂದು ಪಾಲಕರು ನಿರೀಕ್ಷೆ ಇಟ್ಟುಕೊಂಡಿದ್ದರು. ಅದು ಹುಸಿ ಆಗಲಿಲ್ಲ. ಮುಂದೆ ಪಿಯು ಇಲ್ಲವೇ ಡಿಗ್ರಿ ಕಾಲೇಜಿನ ಉಪನ್ಯಾಸಕಿ ಆಗುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಮೀನಾಕ್ಷಿ ತಂದೆ ಪುಂಡಲೀಕ ದಾವನೆ ಮಾತನಾಡಿ, ಬೇರೊಬ್ಬರ ಹೊಲದಲ್ಲಿ ನಾವು ಕೆಲಸ ಮಾಡುತ್ತೇವೆ. ಆದರೆ, ಮಕ್ಕಳ ಓದಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡೆವು. ನಮ್ಮ ಮಗಳಿಗೆ ಚಿನ್ನದ ಪದಕ ಸಿಕ್ಕಿರುವುದು ಬಹಳಷ್ಟು ಖುಷಿ ತಂದಿದೆ. ನಮ್ಮಂತೆ ಮಕ್ಕಳು ಆಗಬಾರದು ಅಂತಾ ಕಷ್ಟಪಟ್ಟು ಐವರು ಮಕ್ಕಳನ್ನು ಓದಿಸಿದೆವು. ಈಗ ಮಕ್ಕಳ ಸಾಧನೆ ಕಂಡು ನಮಗೆ ಮಾತೇ ಬರುತ್ತಿಲ್ಲ. ಇಂಥ ಮಕ್ಕಳನ್ನು ಪಡೆದ ನಾವೇ ಧನ್ಯ ಎಂದು ಭಾವುಕರಾದರು.
ಇದನ್ನೂ ಓದಿ: ತೋಟಗಾರಿಕೆ ವಿವಿಯಲ್ಲಿ 13ನೇ ಘಟಿಕೋತ್ಸವ ; 16 ಚಿನ್ನದ ಪದಕ ಪಡೆದು ಮಿಂಚಿದ ವಿದ್ಯಾರ್ಥಿನಿ ಅಮೂಲ್ಯ