ನವದೆಹಲಿ:17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ ಇಂದು ಕಪ್ನೊಂದಿಗೆ ತಾಯ್ನಾಡಿಗೆ ವಾಪಸಾಗಿದೆ. ಫೈನಲ್ ಪಂದ್ಯದ ಬಳಿಕ ಬೀಕರ ಚಂಡಮಾರುತದಿಂದಾಗಿ ಬಾರ್ಬಡೋಸ್ನಲ್ಲೇ ಉಳಿದುಕೊಂಡಿದ್ದ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು, ಕೋಚ್ ಮತ್ತು ಸಿಬ್ಬಂದಿಗಳು ಬಿಸಿಸಿಐ ವಿಶೇಷ ವಿಮಾನದ ಮೂಲಕ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ ಆಗಮಿಸಿದ್ದಾರೆ.
ವಿಶ್ವ ಚಾಂಪಿಯನ್ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದೀಗ ಭಾರತದ ಆಟಗಾರರು ದೆಹಲಿಯ ಐಟಿಸಿ ಮೌರ್ಯ ಹೋಟೆಲ್ ತಲುಪಿದ್ದಾರೆ. ಇಂದು ಎಲ್ಲಾ ಆಟಗಾರರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಇದಾದ ಬಳಿಕ ಮುಂಬೈಗೆ ತೆರಳಲಿದ್ದಾರೆ.
ಸಂಜೆ ರೋಡ್ ಶೋ:ಸಂಜೆ 5.30ಕ್ಕೆ ಮುಂಬೈನ ನಾರಿಮನ್ ಪಾಯಿಂಟ್ನಿಂದ ವಾಂಖೆಡೆ ಕ್ರೀಡಾಂಗಣದ ವರೆಗೆ ತೆರೆದ ವಾಹನದಲ್ಲಿ ವಿಶ್ವಕಪ್ ರೋಡ್ ಶೋ ನಡೆಯಲಿದೆ. ಇದರಲ್ಲಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲಾ ಆಟಗಾರರು ಭಾಗಿಯಾಗಲಿದ್ದಾರೆ. ಬಳಿಕ ಅಲ್ಲಿಂದ ತಮ್ಮ ನಿವಾಸಕ್ಕೆ ಆಟಗಾರರು ಹಿಂತಿರುಗಲಿದ್ದಾರೆ.