ಹೈದರಾಬಾದ್:ಈ ಸಲದ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ನೀಡುತ್ತಿರುವ ಪ್ರದರ್ಶನ ವ್ಯೂಹೆಗೂ ನಿಲುಕದ್ದಾಗಿದೆ. ಖತರ್ನಾಕ್ ತಂಡವಾಗಿ ಗುರುತಿಸಿಕೊಂಡಿದ್ದು, ಬುಧವಾರ ರಾತ್ರಿ ನಡೆದ ಲಖನೌ ಸೂಪರ್ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ರ ಬಿರುಗಾಳಿ ಬ್ಯಾಟಿಂಗ್ನಿಂದಾಗಿ ಲಖನೌ ನೀಡಿದ್ದ 165 ರನ್ಗಳ ಸಾಧಾರಣ ಮೊತ್ತವನ್ನು ಬರೀ 9.4 ಓವರ್ಗೆ ತಲುಪಿ ಅಚ್ಚರಿ ಮೂಡಿಸಿದರು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರು.
ಡೇಂಜರಸ್ ಫಿನಿಶಿಂಗ್:ದೊಡ್ಡ ಗುರಿಯೇನೂ ಅಲ್ಲದ ಪಂದ್ಯದಲ್ಲಿ ಹೈದರಾಬಾದ್ ತಂಡ ಯಾರೂ ಊಹಿಸದ ಮಾದರಿಯಲ್ಲಿ ಬ್ಯಾಟಿಂಗ್ ಮಾಡಿತು. ವಿಶ್ವಕಪ್ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದರೂ, ಬ್ಯಾಟಿಂಗ್ ಖದರ್ ಮುಂದುವರಿಸಿರುವ ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ 6 ಸಿಕ್ಸರ್ 8 ಬೌಂಡರಿ ಸಮೇತ ಔಟಾಗದೇ 75 ರನ್ ಗಳಿಸಿದರು.
ವಿಶ್ವಕಪ್ನಲ್ಲಿ ತಾನೇನು ಮಾಡುವೆ ಎಂಬಂತೆ ಅಬ್ಬರಿಸಿದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ ಔಟಾಗದೇ 89 ರನ್ ಚಚ್ಚಿದರು. ಇವರ ಇನಿಂಗ್ಸ್ನಲ್ಲಿ ತಲಾ 8 ಸಿಕ್ಸರ್, ಬೌಂಡರಿಗಳಿದ್ದವು. ಇಬ್ಬರು ಆಟಗಾರರ ಸ್ಟ್ರೈಕ್ರೇಟ್ ಕ್ರಮವಾಗಿ 267.86, 296.67 ಇತ್ತು. 6 ಓವರ್ಗಳ ಪವರ್ಪ್ಲೇನಲ್ಲಿ 107 ರನ್ ಕಲೆಹಾಕಿತ್ತು.