ಬೆಂಗಳೂರು: 'ಕಾರ್ಬನ್ ನ್ಯೂಟ್ರಲ್ನಿಂದ ಕಾರ್ಬನ್ ನೆಗೆಟಿವ್ ಕಡೆಗೆ' ರಾಜ್ಯ ದಾಪುಗಾಲು ಇಡಲು ಮುಂದಾಗಿದ್ದು, ರಾಜ್ಯ ಸರ್ಕಾರ ಜೈವಿಕ ಇಂಧನ ಅಭಿವೃದ್ಧಿಗೆ ಮಹತ್ವ ನೀಡಿದೆ.
ರಾಜ್ಯದಲ್ಲಿ ಜೈವಿಕ ಇಂಧನದ ಬೆಳವಣಿಗೆ : ರಾಜ್ಯ ಸರ್ಕಾರ ತಜ್ಞ ಸದಸ್ಯರನ್ನೊಳಗೊಂಡ "ಜೈವಿಕ ಇಂಧನ ಕಾರ್ಯಪಡೆ" ಯನ್ನು ಅರಣ್ಯ ಇಲಾಖೆಯಡಿ 2008 ರಲ್ಲಿ ರಚಿಸಿತು. ಈ ಕಾರ್ಯಪಡೆಯ ಶಿಫಾರಸ್ಸುಗಳಿಗನುಗುಣವಾಗಿ “ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ-2009" ಜಾರಿಗೆ ತಂದಿತು. ಈ ನೀತಿಯ ಅನುಷ್ಟಾನಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ 'ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ' 2010ರ ಡಿಸೆಂಬರ್ ನಲ್ಲಿ ಸ್ಥಾಪಿತವಾಯಿತು.
ಸಾಮಾನ್ಯವಾಗಿ ಇಂಧನಗಳನ್ನು ಎರಡು ರೀತಿಯಲ್ಲಿ ನೋಡಬಹುದು. ಒಂದು ಪಳೆಯುಳಿಕೆ ಇಂಧನ (Fossil Fuel) ಮತ್ತೊಂದು ಜೈವಿಕ ಇಂಧನ. ಸಾವಿರಾರು ವರ್ಷಗಳಿಂದಲೂ ಭೂಮಿಯಲ್ಲಿ ಹುದುಗಲ್ಪಟ್ಟ ಸಸ್ಯಗಳು ಮತ್ತು ಪ್ರಾಣಿಗಳ ದೇಹ ಕೊಳೆತು ಪಳಿಯುಳಿಕೆ ಇಂಧನವಾಗುವುದು. ಅವುಗಳು ಭೂಮಿಯ ಆಳದಲ್ಲಿ ಹುದುಗಿದ್ದು ಲಕ್ಷಾಂತರ ವರ್ಷಗಳ ನಂತರ ಕಲ್ಲಿದ್ದಲು, ತೈಲ ಮತ್ತು ನೈಸರ್ಗಿಕ ಅನಿಲವಾಗಿ ಬದಲಾಗುತ್ತಿವೆ.
ಈ ಇಂಧನಗಳನ್ನು ವಿದ್ಯುಚ್ಛಕ್ತಿ ಉತ್ಪಾದನೆ, ವಾಹನಗಳಲ್ಲಿ, ಕಾರ್ಖಾನೆಗಳಲ್ಲಿ ಇಂಧನವಾಗಿ ಹಾಗೂ ಗೃಹ ಬಳಕೆಯಲ್ಲಿ ಬಳಸಲಾಗುತ್ತಿದೆ. ಪಳೆಯುಳಿಕೆ ಇಂಧನ ಸಂಪನ್ಮೂಲಗಳು ಸೀಮಿತವಾಗಿದ್ದು ಇದರ ಪುನರ್ ಉತ್ಪತ್ತಿ ಅಸಾಧ್ಯವಿರುತ್ತದೆ. ಆಳವಾದ ಬಾವಿಯಿಂದ ಈ ಇಂಧನ ತೆಗೆಯಲು ಮತ್ತು ಸಂಸ್ಕರಿಸಲು ಬೃಹತ್ ಬಂಡವಾಳ ಹೂಡಿಕೆ, ಅತ್ಯಾಧುನಿಕ ತಂತ್ರಜ್ಞಾನ, ಶೇಖರಣೆ ಹಾಗೂ ಸಾಗಾಟಗಳಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳ ಅಗತ್ಯವಿರುತ್ತದೆ. ಪಳೆಯುಳಿಕೆ ಇಂಧನ ಅತಿಯಾದ ಬಳಕೆಯು ಮಾಲಿನ್ಯವನ್ನು ಉಂಟು ಮಾಡುತ್ತವೆ ಮತ್ತು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ.
ಜೈವಿಕ ಇಂಧನ : ನವೀಕರಿಸಬಹುದಾದ ಸಸ್ಯ ಹಾಗೂ ಪ್ರಾಣಿ ಜನ್ಯಗಳಿಂದ ಉತ್ಪಾದಿಸಲಾಗುವ ದ್ರವ ಮತ್ತು ಅನಿಲ ರೂಪದ ಇಂಧನವಾಗಿದೆ. ಪರ್ಯಾಯ ಇಂಧನಮೂಲವಾಗಿ ಜೈವಿಕ ಇಂಧನದ ಬಳಕೆಯಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ವಾಹನಗಳು ಹಾಗೂ ಕೈಗಾರಿಕೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜೈವಿಕ ಇಂಧನಗಳಾದ ಎಥನಾಲ್, ಬಯೋಡೀಸೆಲ್ ಮತ್ತು ಬಯೋಗ್ಯಾಸ್‌ಗಳು ಜಗತ್ತಿನಾದ್ಯಂತ ಬಳಕೆಯಲ್ಲಿವೆ. ಇಂಧನ ಸುರಕ್ಷತೆ, ಪರಿಸರ ಸಂರಕ್ಷಣೆ, ಆಮದು ಮೇಲಿನ ಅವಲಂಬನೆಯ ಕಡಿತ, ಗ್ರಾಮೀಣ ಉದ್ಯೋಗ ಸೃಜನೆ ಮತ್ತು ಕೃಷಿಗೆ ಪೂರಕವಾಗಿ ಗ್ರಾಮೀಣ ರೈತರ ಆರ್ಥಿಕ ಪರಿಸ್ಥಿತಿ ಬಲವರ್ಧನೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಜೈವಿಕ ಇಂಧನ ಕ್ಷೇತ್ರದ ಬೆಳವಣಿಗೆ ಪ್ರಸ್ತುತ ಅತ್ಯಂತ ಮಹತ್ವದ್ದಾಗಿದೆ.
ಕರ್ನಾಟಕದಲ್ಲಿ ವಿವಿಧ ಭೌಗೋಳಿಕ ವಾತಾವರಣದಲ್ಲಿ ಬೆಳೆಯುವ/ ಲಭ್ಯವಿರುವ ಹೊಂಗೆ, ಬೇವು, ಹಿಪ್ಪೆ, ಜತ್ರೋಪ, ಸೀಮರೂಬ, ನಾಗಸಂಪಿಗೆ, ಸುರಹೊನ್ನೆ ಮೊದಲಾದವುಗಳಿಂದ ದೊರೆಯುವ ತೈಲ ಬೀಜಗಳು ಹಾಗೂ ಕರಿದ ಎಣ್ಣೆಯನ್ನು ಸಹ ಬಳಸಿ ಬಯೋಡೀಸಲ್ ಉತ್ಪಾದನೆ ಮತ್ತು ಬಳಕೆಯ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಲಾಗಿದೆ. ಶೇ.25 ಕ್ಕಿಂತ ಹೆಚ್ಚಿನ ಪ್ರಮಾಣದ ತೈಲಾಂಶವುಳ್ಳ ಜೈವಿಕ ಇಂಧನ ಸಸ್ಯಗಳ ಅಭಿವೃದ್ಧಿಗೆ ರಾಜ್ಯದಲ್ಲಿ ಒತ್ತು ನೀಡಲಾಗುತ್ತಿದೆ. ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ರಚನೆಯ ನಂತರ ಹಲವಾರು ಕಾರ್ಯ ಚಟುವಟಿಕೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ.
![BIOFUEL](https://etvbharatimages.akamaized.net/etvbharat/prod-images/15-02-2025/kn-bng-01-from-carbon-neutral-to-carbon-negative-spl-story-script-7208083_15022025140536_1502f_1739608536_428.jpg)
ಸಮುದಾಯ ಸಹಭಾಗಿತ್ವ ಮತ್ತು ವಿಕೇಂದ್ರೀಕೃತ ವ್ಯವಸ್ಥೆಯಡಿ ದೊಡ್ಡ ಪ್ರಮಾಣದಲ್ಲಿ ಅರಣ್ಯೀಕರಣ, ಬೀಜ ಸಂಗ್ರಹಣೆ, ಮೌಲ್ಯವರ್ಧನೆಗಳಿಗೆ ಮಹತ್ವ ನೀಡಿದೆ. ಜನ ಜಾಗೃತಿ, ಸಮುದಾಯ ಪ್ರೋತ್ಸಾಹ, ರೈತರು, ವಿಧ್ಯಾರ್ಥಿಗಳು, ಉದ್ದಿಮೆದಾರರುಗಳಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಂಡಿದೆ. ಜಿಲ್ಲಾ ಪಂಚಾಯತ್ಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತಿ ಜಿಲ್ಲೆಯಲ್ಲಿ 'ಜೈವಿಕ ಇಂಧನ ಉಸ್ತುವಾರಿ ಸಮಿತಿ'ಯನ್ನು ರಚಿಸಲಾಗಿದ್ದು, ವಿವಿಧ ಇಲಾಖೆಗಳ ಸಂಯೋಜನೆಯೊಂದಿಗೆ ಜೈವಿಕ ಇಂಧನ ಅಭಿವೃದ್ಧಿಗೆ ಮಹತ್ವ ನೀಡಿದೆ.
![BIOFUEL](https://etvbharatimages.akamaized.net/etvbharat/prod-images/15-02-2025/kn-bng-01-from-carbon-neutral-to-carbon-negative-spl-story-script-7208083_15022025140536_1502f_1739608536_442.jpg)
ಬದಲಿ ಇಂಧನ ಉತ್ಪಾದನೆ ಹಾಗೂ ಬಳಕೆಗೆ ಆದ್ಯತೆಗಳು : ಭಾರತ ದೇಶದಲ್ಲಿ ಶೇ.85ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇವುಗಳ ಮೇಲಿನ ಅತಿಯಾದ ಅವಲಂಬನೆಯಿಂದ ಈ ಇಂಧನ ಮೂಲಗಳು ನಶಿಸಿ ಹೋಗುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ಇಂಧನದ ಬೇಡಿಕೆಯನ್ನು ಪೂರೈಸಲು ಕಳೆದ ಎರಡು-ಮೂರು ದಶಕಗಳಿಂದ ಜಗತ್ತಿನಾದ್ಯಂತ ಹೊಸ ಇಂಧನಗಳ ಆವಿಷ್ಕಾರ ಮತ್ತು ಬಳಕೆಗೆ ಆದ್ಯತೆ ನೀಡಲಾಗುತ್ತಿದೆ.
ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಜೈವಿಕ ಇಂಧನ ಮೂಲಗಳ ಅಭಿವೃದ್ಧಿ ಮತ್ತು ಬಳಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀತಿ ಮತ್ತು ಪೂರಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿವೆ. ಈ ರೀತಿಯ ಇಂಧನಗಳನ್ನು ಗೃಹ ಬಳಕೆ, ವಿದ್ಯುಚ್ಛಕ್ತಿ ಉತ್ಪಾದನೆ, ವಾಹನಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ಇಂಧನವಾಗಿ ಬಳಸಬಹುದಾಗಿದೆ.
![BIOFUEL](https://etvbharatimages.akamaized.net/etvbharat/prod-images/15-02-2025/kn-bng-01-from-carbon-neutral-to-carbon-negative-spl-story-script-7208083_15022025140536_1502f_1739608536_547.jpg)
ಎಥನಾಲ್ ಅನ್ನು ಪೆಟ್ರೋಲ್ ಜೊತೆ ಮಿಶ್ರಣ ಮತ್ತು ಬಯೋಡೀಸೆಲ್ ಡೀಸೆಲ್ ಜೊತೆ ಮಿಶ್ರಣಗೊಳಿಸಿ ವಾಹನಗಳಲ್ಲಿ ಇಂಧನವಾಗಿ ಬಳಸುವ ಪ್ರಕ್ರಿಯೆ ಜಾರಿಯಲ್ಲಿದೆ. ಬಯೋಗ್ಯಾಸ್ (ಸಿಬಿಜಿ) ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಎಸ್ಎಟಿಎಟಿ ಯೋಜನೆಯಡಿ ಹೆಚ್ಚಿನ ನೆರವನ್ನು ನೀಡುತ್ತಿದೆ. ಬಯೋಡೀಸೆಲ್ ಮತ್ತು ಬಯೋಗ್ಯಾಸ್ ಉತ್ಪಾದನೆ ಜೊತೆಗೆ ಸಾವಯವ ಗೊಬ್ಬರವು ಲಭ್ಯವಾಗಲಿದ್ದು ಇದು ಕೃಷಿ ಜಮೀನಿನ ಫಲವತ್ತತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು. ಬಯೋಡೀಸೆಲ್ ಉತ್ಪಾದನಾ ಹಂತದಲ್ಲಿ ಮತ್ತೊಂದು ಉಪ ಉತ್ಪನ್ನ ಗ್ಲಿಸರಿನ್ ದೊರೆಯಲಿದ್ದು, ಇದನ್ನು ಸೋಪು, ಲಿಕ್ವಿಡ್ ಸೋಪು, ಫ್ಲೋರ್ ಕ್ಲೀನರ್ ಮೊದಲಾದ ಮೌಲ್ಯ ವರ್ಧಿತ ಉತ್ಪನ್ನಗಳನ್ನು ತಯಾರಿಸಲು ಅನುಕೂಲವಾಗಿದೆ.
ಯೋಜನೆಗಳು : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(ನರೇಗಾ) ಹಾಗೂ ಮತ್ತಿತರ ಅರಣ್ಯೀಕರಣ ಯೋಜನೆಗಳಡಿ ಜಮೀನಿನ ಬದುಗಳು ಹಾಗೂ ಸಾಮೂಹಿಕ ಭೂಮಿಗಳಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೃಷಿ ಅರಣ್ಯ ಮತ್ತು ನೆಡುತೋಪುಗಳ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ 34 "ಜೈವಿಕ ಇಂಧನ ಸಂಶೋಧನೆ, ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ" ಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಬೀಜ ಹಾಗೂ ಕರಿದ ಎಣ್ಣೆ, ಸಂಗ್ರಹಣೆ, ಸಂಸ್ಕರಣೆ, ಬಯೋಡೀಸೆಲ್ ಉತ್ಪಾದನೆ, ಉಪ ಉತ್ಪನ್ನಗಳ ತಯಾರಿ, ಮಾಲ್ಯವರ್ಧನೆ, ಮಾಹಿತಿ, ತರಬೇತಿ ಹಾಗೂ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.
![BIOFUEL](https://etvbharatimages.akamaized.net/etvbharat/prod-images/15-02-2025/kn-bng-01-from-carbon-neutral-to-carbon-negative-spl-story-script-7208083_15022025140536_1502f_1739608536_430.jpg)
ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ (ಬೆಂಗಳೂರು, ರಾಯಚೂರು, ಧಾರವಾಡ ಮತ್ತು ಶಿವಮೊಗ್ಗ) "ಜೈವಿಕ ಇಂಧನ ಉದ್ಯಾನ" ಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ತರಬೇತಿ, ಸಂಶೋಧನೆ, ಸಂಸ್ಕರಣೆ, ತಳಿ ಅಭಿವೃದ್ಧಿ, ರೈತರ ಗುಂಪುಗಳ ರಚನೆ ಇತ್ಯಾದಿ ಚಟುವಟಿಕೆಗಳು ನಡೆಯುತ್ತಿವೆ.
ಉತ್ತಮ ತಳಿಯ ಜೈವಿಕ ಇಂಧನ ಸಸಿಗಳ ಅಭಿವೃದ್ಧಿಗಾಗಿ ಅರಣ್ಯ ಇಲಾಖೆಯ ಸಂಶೋಧನೆ ಹಾಗೂ ಬಳಕೆ ವಿಭಾಗದ ಸಹಯೋಗದೊಂದಿಗೆ ರಾಜ್ಯದ 9 ಸ್ಥಳಗಳಲ್ಲಿ “ಕ್ಲೋನಲ್ ಆರ್ಟ್ಸ್” ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ “ಜೈವಿಕ ಇಂಧನ ಸಂಶೋಧನೆ ಹಾಗೂ ಗುಣಮಟ್ಟ ಖಾತ್ರಿ ಪ್ರಯೋಗ ಶಾಲೆ" ಸ್ಥಾಪಿಸಿದ್ದು ಉತ್ಪನ್ನಗಳ ವೈಜ್ಞಾನಿಕ ಪರೀಕ್ಷೆ ಮತ್ತು ಪ್ರಮಾಣೀಕರಣ ಮಾಡಲಾಗುವುದು. ಈ ಪ್ರಯೋಗಾಲಯವು ನ್ಯಾಷನಲ್ ಅಕ್ರೆಡಿಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಅಂಡ್ ಕ್ಯಾಲಿಬ್ರೇಶನ್ ಲ್ಯಾಬೋರೇಟರೀ (NABL) ನಿಂದ ಮಾನ್ಯತೆ ಪಡೆದಿದೆ.
ಸ್ವಯಂ ಸೇವಾ ಸಂಸ್ಥೆಗಳು, ಸಮುದಾಯ ಸಹಭಾಗಿತ್ವ, ಜಾಗೃತಿ ಮತ್ತು ಬೇರೆ ಬೇರೆ ಬಾಗೀದಾರರೊಂದಿಗೆ ಸಂಪರ್ಕ ಹೊಂದಲು 12 ಜಿಲ್ಲೆಗಳಲ್ಲಿ 12 ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. "ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಳಿ” ಸಹಯೋಗದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿ ಸಂಶೋಧನಾ ಚಟುವಟಿಕೆಗಳಿಗೆ ಪ್ರೋತ್ಸಾಹ. ರಾಜ್ಯದಲ್ಲಿ ಲಭ್ಯವಿರುವ ಜೈವಿಕ ಇಂಧನ ಸಂಪನ್ಮೂಲಗಳ ಮಾಹಿತಿಗಳನ್ನು ಕ್ರೋಢೀಕರಿಸಿ ವರದಿಯನ್ನು ಪ್ರಕಟಿಸಲಾಗಿದೆ.
ಮಂಡಳಿಯು ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಯಲ್ಲಿ ರೈತರು, ಭೂ ರಹಿತರು, ಸ್ವ ಸಹಾಯ ಗುಂಪು, ಜಲಾನಯನ ಅಭಿವೃದ್ಧಿ ಸಂಘಗಳು, ಗ್ರಾಮ ಅರಣ್ಯ ಸಮಿತಿ, ಮೊದಲಾದ ಸಮುದಾಯ ಆಧಾರಿತ ಗುಂಪುಗಳ ಭಾಗವಹಿಸುವಿಕೆಗೆ ಮಹತ್ವ ನೀಡಿರುತ್ತದೆ. ಜೈವಿಕ ಇಂಧನ ಸಂಪನ್ಮೂಲಗಳ ಅಭಿವೃದ್ಧಿ, ಸಂಸ್ಕರಣೆ ಹಾಗೂ ಬಳಕೆ ಸಂಬಂಧ ನಿರಂತರ ಕಾರ್ಯಚಟುವಟಿಕೆಗಳನ್ನು ರಾಜ್ಯಾದ್ಯಂತ ನಡೆಸಿಕೊಂಡು ಬಂದಿರುತ್ತದೆ. ಮುಂದಿನ ದಿನಗಳಲ್ಲಿ ಜೈವಿಕ ಇಂಧನ ಕ್ಷೇತ್ರದ ಉದ್ದಿಮೆಯಾಗಿ ಹಾಗೂ ವಾಣಿಜ್ಯೀಕರಣಗೊಳ್ಳುವ ನಿಟ್ಟಿನಲ್ಲಿ ಎಲ್ಲಾ ಪಾಲುದಾರರನ್ನು ಒಗ್ಗೂಡಿಸುವ ಗುರಿ ಹೊಂದಲಾಗಿದೆ.
ಎಥನಾಲ್ : ಸಕ್ಕರೆ ಅಥವಾ ಪಿಷ್ಣಾಂಶವುಳ್ಳ ಕಬ್ಬು, ಕಬ್ಬಿನ ತ್ಯಾಜ್ಯ ಕಾಕಂಬಿ, ಜೋಳ, ಬೀಟ್ ರೂಟ್, ಮೆಕ್ಕೆ ಜೋಳ, ತಾಳೆ, ಕೊಳೆತ ಹಣ್ಣು, ತರಕಾರಿ, ಕೊಳೆತ ಆಹಾರ ಧಾನ್ಯ, ಮೊದಲಾದವುಗಳಿಂದ ಉತ್ಪಾದಿಸಬಹುದಾಗಿದೆ.
2G ಎಥನಾಲ್ : ಕೃಷಿ ತ್ಯಾಜ್ಯಗಳಾದ ಬತ್ತ, ಗೋದಿ ಹುಲ್ಲು, ಹತ್ತಿ ಕಟ್ಟಿಗೆ, ಜೋಳದ ದಂಟು ಮುಂತಾದ ಲಿನ್ನೊಸೆಲ್ಯೂಲೋಸಿಕ್ ವಸ್ತುಗಳನ್ನು ಬಳಸಿ ಎಥನಾಲ್ ಅನ್ನು ಉತ್ಪಾದಿಸಲು ಒತ್ತು ನೀಡಲಾಗಿದೆ. ಈ ಕೃಷಿ ತ್ಯಾಜ್ಯಗಳನ್ನು ಬಳಸುವುದರಿಂದ ರೈತರು ಜಮೀನುಗಳಲ್ಲಿ ಕೃಷಿ ತ್ಯಾಜ್ಯಗಳ ಸುಡುವುದನ್ನು ತಪ್ಪಿಸಬಹುದಾಗಿದ್ದು, ವಾಯು ಮಾಲಿನ್ಯವನ್ನು ತಡೆಗಟ್ಟಲು ನೆರವಾಗಲಿದೆ. ಬಯೋಡೀಸೆಲ್ ಅನ್ನು ಅಖಾದ್ಯ ತೈಲ ಬೀಜಗಳು (TBOs), ಪ್ರಾಣಿಜನ್ಯ ಕೊಬ್ಬು ಮತ್ತು ಕರಿದ ಅಡುಗೆ ಎಣ್ಣೆಗಳಿಂದ (UCO) ಉತ್ಪಾದಿಸಲಾಗುತ್ತದೆ.
ಬ್ರಿಕೆಟ್ಸ್/ಪಿಲೆಟ್ಸ್ : ಹೊಂಗೆ ಬೀಜದ ಸಿಪ್ಪೆ, ಕೃಷಿ ತ್ಯಾಜ್ಯಗಳು, ಕಾಫಿ ಬೀಜದ ಕವಚ, ಮರದ ಹೊಟ್ಟು, ಶೇಂಗಾ ಇತರೆ ಎಣ್ಣೆ ಬೀಜಗಳ ಸಿಪ್ಪೆಗಳನ್ನು ಬಳಸಿ ಬ್ರಿಕೆಟ್ಸ್/ಪಿಲೆಟ್ಸ್ ಉತ್ಪಾದನೆ ಮಾಡಬಹುದಾಗಿದ್ದು, ಇವುಗಳು ಪ್ರಮುಖ ಇಂಧನ ಮೂಲವಾಗಲಿವೆ. ಕೇಂದ್ರ ಸರ್ಕಾರವು ಥರ್ಮಲ್ ವಿದ್ಯುತ್ ಘಟಕಗಳಲ್ಲಿ ಶೇ.10 ರಷ್ಟನ್ನು ಬಯೋಮಾಸ್, ಬ್ರಿಕೆಟ್ಸ್ ಕಡ್ಡಾಯವಾಗಿ ಬಳಸಲು ಆದೇಶಿಸಿರುವುದರಿಂದ ಬ್ರಿಕೆಟ್ಸ್/ಪಿಲೆಟ್ಸ್ ಬೇಡಿಕೆ ಹೆಚ್ಚಾಗಲಿದೆ. ಕಾಫಿ ಬೀಜ ಕವಚ
ಮುಂತಾದವುಗಳನ್ನು ಬಳಸುವುದರಿಂದ ಪರಿಸರ ಹಾನಿಯನ್ನು ತಡೆಯಲು ಅನುಕೂಲವಾಗಲಿದೆ.
ಬಯೋಗ್ಯಾಸ್ (ಸಿ.ಬಿ.ಜಿ) ಯನ್ನು ಸಗಣಿ, ಕೊಳೆತ ತರಕಾರಿಗಳು ಆಹಾರ ಪದಾರ್ಥಗಳು ಹಾಗೂ ಹಸಿರು ತ್ಯಾಜ್ಯಗಳು (ಮುನಿಸಿಪಲ್ ಸಾಲಿಡ್ ವೇಸ್ಟ್- MSW) ಕೃಷಿ ತ್ಯಾಜ್ಯಗಳು ಹಾಗೂ ನೇಪಿಯರ್ ಗ್ರಾಸ್ ಬಳಸಿಕೊಂಡು ಉತ್ಪಾದಿಸಬಹುದಾಗಿದೆ.
ಗ್ರೀನ್ ಹೈಡೋಜನ್ : ಮುಂದಿನ ದಿನಗಳಲ್ಲಿ ಇಂಧನ ಉತ್ಪಾದನೆಯಲ್ಲಿ ಜಲಜನಕ (H2) ಪ್ರಮುಖವಾಗಲಿದ್ದು, ಈ ಇಂಧನ ಶೂನ್ಯ ಕಾರ್ಬನ್, ಪುನರುತ್ಪಾದಿಸಲ್ಪಡುವ ಹಾಗೂ ಪರಿಸರ ಸ್ನೇಹಿ ಇಂಧನವಾಗಲಿದೆ. ಪ್ರಸ್ತುತ ಪ್ರಾಯೋಗಿಕ ಉತ್ಪಾದನಾ ಘಟಕಗಳು ಪ್ರಾರಂಭವಾಗಲಿದ್ದು, ಕೆಲವು ವರ್ಷಗಳಲ್ಲಿ ಹೆಚ್ಚಿನ ಉತ್ಪಾದನೆ ಗುರಿ ಹೊಂದಲಾಗಿದೆ. ಪ್ಯಾರಿಸ್ ಒಡಂಬಡಿಕೆ ಪ್ರಕಾರ 2070ರ ವೇಳೆಗೆ ಹೊರಸೂಸುವ ಇಂಗಾಲದ ಪ್ರಮಾಣವನ್ನು ಶೂನ್ಯಮಟ್ಟಕ್ಕೆ ಇಳಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀತಿ-ನಿರ್ಧಾರ, ಪ್ರೋತ್ಸಾಹಕ ಕ್ರಮ ಸೇರಿ ಹಲವು ಸೂಚನೆಗಳನ್ನು ನೀಡಿದೆ.
ವಾಹನಗಳಿಗೆ ಇಂಧನ : ಸಸ್ಯಗಳು ಮತ್ತು ಕೃಷಿ ತ್ಯಾಜ್ಯದಿಂದ ಉತ್ಪಾದಿತ ಜೈವಿಕ ಅನಿಲ (ಸಾವಯವ ಮಿಥೇನ್)ವನ್ನು ಸಿಎನ್‌ಜಿ ವಾಹನಗಳಿಗೆ ನೇರವಾಗಿ ಪ್ರತಿಶತ ನೂರರಷ್ಟು ಬಳಸಬಹುದಾಗಿದೆ. ಸಿಎನ್‌ಜಿ ಬಂಕ್‌ಗೆ ಬಯೋಗ್ಯಾಸ್ ಪೂರೈಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ, ಗೇಲ್ ಮತ್ತು ಕಾರ್ಖಾನೆಗಳ ಮಧ್ಯೆ ತ್ರಿಪಕ್ಷೀಯ ಒಪ್ಪಂದವಾಗಿದೆ. ಒಂದು ಕೆ.ಜಿಗೆ 71 ರಿಂದ 72 ರೂ.ನಂತೆ ಕಾರ್ಖಾನೆಗೆ ಈ ಅನಿಲ ಸಿಗುತ್ತದೆ. ಜೈವಿಕ ಇಂಧನಕ್ಕೆ ಬೇಡಿಕೆ ಹೆಚ್ಚುತ್ತಿದೆ.
ಆದರೆ ಜೈವಿಕ ಇಂಧನ, ತಯಾರಿಸಲು ಬೇಕಾದ ಕಚ್ಚಾ ವಸ್ತುಗಳದೇ ದೊಡ್ಡ ಸವಾಲು. ಜೈವಿಕ ಅನಿಲ ತಯಾರಿಕೆಗೆ ದೊಡ್ಡಮಟ್ಟದಲ್ಲಿ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ 90 ಲಕ್ಷ ರೂ.ವರೆಗೆ ಸಹಾಯಧನ ನೀಡುತ್ತದೆ. ಹೂಡಿಕೆ ಮಾಡಲು ಮುಂದೆ ಬರುವವರಿಗೆ ಮಂಡಳಿ ಸಹಾಯ, ಬೆಂಬಲ ನೀಡಲಿದೆ.
"ಗ್ರೀನ್ ಹೈಡೋಜನ್ ತಂತ್ರಜ್ಞಾನ ಜೈವಿಕ ಅನಿಲವನ್ನು ಗ್ರೀನ್ ಹೈಡ್ರೋಜನ್‌ಗೆ ಪರಿವರ್ತಿಸಲು ಐಐಎಸ್‌ಸಿ ಜತೆಗೆ ಕೆಲಸ ಮಾಡುತ್ತಿದ್ದು, ಹೊಂಗೆ, ಕಾಫಿ ಸಿಪ್ಪೆ, ಗಿಡದ ಟೊಂಗೆ, ಭತ್ತ ಬೆಳೆಯುವ ಪ್ರದೇಶದಲ್ಲಿ ಹುಲ್ಲು, ಕಬ್ಬು ಬೆಳೆಯುವ ಪ್ರದೇಶದಲ್ಲಿ ತ್ಯಾಜ್ಯ, ಬಳಕೆಗೆ ಯೋಗ್ಯವಲ್ಲದ ಧಾನ್ಯ ಬಳಸಿಕೊಂಡು ಜೈವಿಕ ಅನಿಲ ತಯಾರಿಕೆಗೆ ಪ್ರೋತ್ಸಾಹಿಸಲು ಮಂಡಳಿ ಉತ್ಸುಕವಾಗಿದೆ. ಕಾಫಿ, ಭತ್ತ, ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಜಿಲ್ಲೆಗಳ ರೈತರ ಮಾತುಕತೆ, ಜೈವಿಕ ಇಂಧನ ಸಸ್ಯಗಳನ್ನು ಬೆಳೆಯಲು ಜಾಗೃತಿ ಮೂಡಿಸಲಾಗುತ್ತಿದೆ " ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಲ್. ಶಿವಶಂಕರ್ ಅವರು 'ಈಟಿವಿ ಭಾರತ್'ಗೆ ತಿಳಿಸಿದರು.
" ದೇಶದಲ್ಲೇ ಮೊದಲ ಬಾರಿಗೆ ಜೈವಿಕ ಇಂಧನ ನೀತಿ 2009 ರಾಜ್ಯದಲ್ಲಿ ಜಾರಿಯಾಗಿದೆ. ನಂತರ ಕೇಂದ್ರ ಸರ್ಕಾರ, ಹಲವು ರಾಜ್ಯಗಳು ಜಾರಿಗೊಳಿಸಿದವು. 15 ವರ್ಷಗಳ ಹಿಂದಿನ ನೀತಿ ಪರಿಷ್ಕರಿಸಿ ಕರಡು ಪ್ರಸ್ತಾವನೆ ಸಿದ್ಧತೆ ಹಂತದಲ್ಲಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸುರಕ್ಷಿತ, ಪರಿಸರ ಸ್ನೇಹಿ ಇಂಧನ, ಜೈವಿಕ ಉತ್ಪನ್ನಗಳ ಕುರಿತು ರೈತರಲ್ಲಿ ಜಾಗೃತಿ, ಆಸಕ್ತ ಉದ್ಯಮ, ಹೂಡಿಕೆದಾರರಿಗೆ ಬೆಂಬಲ, ಯುವಜನರಿಗೆ ಅಗತ್ಯ ತರಬೇತಿ ನೀಡಿ ಸೃಷ್ಟಿಯಾದ ಉದ್ಯೋಗಗಳ ಬಳಕೆಗೆ ಅವಕಾಶ ಕಲ್ಪಿಸುವುದು ನೂತನ ನೀತಿಯ ಉದ್ದೇಶ " ಎಂದರು.
"ಗ್ರಾಮೀಣ ಪ್ರದೇಶದಲ್ಲಿ ರೈತರ ಸಹಭಾಗಿತ್ವದಲ್ಲಿ ವಿವಿಧ ಜೈವಿಕ ಖಾದ್ಯಗಳನ್ನು ಬಳಸಿಕೊಂಡು ಇಂಧನ ತಯಾರಿಸಲಾಗುತ್ತಿದೆ. ರೈತರಿಗೆ, ಸರ್ಕಾರಿ ಅಧಿಕಾರಿಗಳಿಗೆ, ಸ್ವಯಂ ಸೇವಾ ಸಂಸ್ಥೆಗಳಿಗೆ, ಪಂಚಾಯತ್ ರಾಜ್ ಚುನಾಯಿತ ಪ್ರತಿನಿಧಿಗಳಿಗೆ ಕಾರ್ಯಾಗಾರ, ತರಬೇತಿ, ಪ್ರಾತ್ಯಕ್ಷಿಕೆ, ವಸ್ತು ಪ್ರದರ್ಶನ ಚಟುವಟಿಕೆಗಳ ಮೂಲಕ ಜೈವಿಕ ಇಂಧನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ " ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಯೋಜನಾ ಸಲಹೆಗಾರ ಡಾ.ದಯಾನಂದ್ ಅವರು 'ಈಟಿವಿ ಭಾರತ್'ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಸ್ಮಾರ್ಟ್ ಕೃಷಿಗೆ ಬಂದಿದೆ 'ಕೈರೋ' ಡಿವೈಸ್: ಈ ಉಪಕರಣದ ಅನುಕೂಲಗಳೇನು?
ಇದನ್ನೂ ಓದಿ: ರಾಜ್ಯದಲ್ಲಿ ₹6.23 ಲಕ್ಷ ಕೋಟಿ ಹೂಡಿಕೆ ಒಪ್ಪಂದಕ್ಕೆ ಸಹಿ, ಈ ವಲಯದ್ದೇ ಸಿಂಹಪಾಲು