ಬೆಂಗಳೂರು: ನೆರೆಯ ರಾಜ್ಯದಿಂದ ಅಪಾಯಕಾರಿ ದ್ರವ ತ್ಯಾಜ್ಯವನ್ನು ಟ್ಯಾಂಕರ್ಗಳಲ್ಲಿ ತಂದು ಮಂಗಳೂರಿನ ಚರಂಡಿ ಮತ್ತು ರಾಜಕಾಲುವೆಗೆ ಸುರಿಯಲಾಗುತ್ತಿದೆ ಎಂಬ ವರದಿಗೆ ಸ್ಪಂದಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ, ಈ ಬಗ್ಗೆ ಜಲ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚರಂಡಿ, ''ರಾಜಕಾಲುವೆಗಳಿಗೆ ಸುರಿದ ದ್ರವ ತ್ಯಾಜ್ಯ, ನದಿ, ಕೆರೆ, ಸಮುದ್ರ ಸೇರಿ ಜಲ ಚರಗಳ ಮತ್ತು ಜಾನುವಾರುಗಳ ಸಾವಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕೂಡಲೇ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಜಲ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಮಂಗಳೂರು ವಿಭಾಗದ ಅಧಿಕಾರಿಗಳಿಗೆ ಸೂಚಿಸುತ್ತೇನೆ'' ಎಂದು ಹೇಳಿದರು.
''ದ್ರವ ತ್ಯಾಜ್ಯವನ್ನು ಬತ್ತಿ ಹೋದ ಬೋರ್ವೆಲ್, ಚರಂಡಿ, ಕೆರೆ, ಕುಂಟೆ ಸೇರಿದಂತೆ ಯಾವುದೇ ಜಲ ಮೂಲಕ್ಕೆ ಹರಿಸುವುದು ಅಪರಾಧವಾಗಿರುತ್ತದೆ. ಈ ರೀತಿ ಕಾನೂನುಬಾಹಿರವಾಗಿ ತ್ಯಾಜ್ಯ ಸುರಿಯುವವರ ವಿರುದ್ಧ ಪರಿಸರ ಸಂರಕ್ಷಣಾ ಕಾಯ್ದೆ ಅಡಿಯೂ ಕ್ರಮ ಜರುಗಿಸಲಾಗುವುದು'' ಎಂದರು.
''ಕರ್ನಾಟಕ ಸರ್ಕಾರ ಪ್ರಕೃತಿ ಪರಿಸರ ಸಂರಕ್ಷಣೆಗೆ ಬದ್ಧವಾಗಿದ್ದು, ಈ ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು, ಪೊಲೀಸರು ಕೂಡ ಈ ನಿಟ್ಟಿನಲ್ಲಿ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸುತ್ತಾರೆ'' ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ದಲಿತ ಮುಖ್ಯಮಂತ್ರಿ ಪ್ರಸ್ತಾಪ ಅನಾವಶ್ಯಕ : ಸಚಿವ ಕೆ.ಎನ್. ರಾಜಣ್ಣ