ಬೆಂಗಳೂರು: "ಸಿದ್ದರಾಮಯ್ಯನವರು ನಮಗೆ ಬೇಕೇ ಬೇಕು. ಮುಂದಿನ ನಾಯಕತ್ವ ಬೆಳೆಸೋವರೆಗೆ ಇರಬೇಕು" ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯ ಪಟ್ಟಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈ ಹಿಂದೆಯೂ ಹೇಳಿದ್ದೆ, ಈಗಲೂ ಹೇಳ್ತೇನೆ. ಸಿದ್ದರಾಮಯ್ಯನವರು ನಮಗೆ ಬೇಕೇ ಬೇಕು. ಚುನಾವಣೆಗೆ ನಿಲ್ಲದಿದ್ದರೂ ಸರಿಯೇ. ರಾಜಕೀಯ ನಿವೃತ್ತಿಯಾದರೂ ಅವರು ಬೇಕು. ಮುಂದಿನ ನಾಯಕತ್ವ ಬೆಳೆಸೋವರೆಗೆ ಇರಬೇಕು. ಸಿದ್ದರಾಮಯ್ಯ ರಾಜಕಾರಣದಲ್ಲಿರಬೇಕು" ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, "ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಖರ್ಗೆ ಅವರು ತೀರ್ಮಾನ ಮಾಡ್ತಾರೆ. ಕರ್ನಾಟಕದಲ್ಲಿ ಈ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಬೇರೆ ರಾಜ್ಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮ ರಾಜ್ಯದ ಚರ್ಚೆ ಬಂದಾಗ ಅಭಿಪ್ರಾಯ ಹೇಳ್ತೇವೆ" ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ ವಿಚಾರವಾಗಿ ಮಾತನಾಡಿ, "ಉಸ್ತುವಾರಿ ಬದಲಾವಣೆ ಬಗ್ಗೆ ಗೊತ್ತಿಲ್ಲ. ನಮ್ಮ ವ್ಯಾಪ್ತಿಯಲ್ಲಿ ಅದು ಇಲ್ಲ. ರಾಹುಲ್ ಗಾಂಧಿ ನಿರ್ಧಾರ ಮಾಡ್ತಾರೆ. ಬೇರೆ ರಾಜ್ಯಗಳ ಉಸ್ತುವಾರಿ ಬದಲಾವಣೆ ಆಗಿದೆ. ಸುರ್ಜೇವಾಲ ಈಗ ಉಸ್ತುವಾರಿ ಇದ್ದಾರೆ. ಅದರ ಬಗ್ಗೆ ಏನು ಹೇಳಲ್ಲ" ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರೆ ಅಂತಾನೇ ನಾವೆಲ್ಲ ಭಾವಿಸಿದ್ದೇವೆ: ಸಚಿವ ಜಿ.ಪರಮೇಶ್ವರ್
ಇದನ್ನೂ ಓದಿ: ದಲಿತ ಮುಖ್ಯಮಂತ್ರಿ ಪ್ರಸ್ತಾಪ ಅನಾವಶ್ಯಕ : ಸಚಿವ ಕೆ.ಎನ್. ರಾಜಣ್ಣ