ಗಾಜಾ ಪಟ್ಟಿ : ಕದನದ ವಿರಾಮದ ಒಪ್ಪಂದದಂತೆ ಹಮಾಸ್ ನೇತೃತ್ವದ ಉಗ್ರಗಾಮಿಗಳು ಇಸ್ರೇಲ್ನ ಮೂವರು ಪುರುಷ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು. ಈ ಬಿಡುಗಡೆಗೂ ಮುನ್ನ ದಕ್ಷಿಣ ಗಾಜಾ ಪಟ್ಟಿಯಲ್ಲಿ ಜನ ಸಮೂಹದ ಮುಂದೆ ಬೃಹತ್ ಮೆರವಣಿಗೆ ನಡೆಸಲಾಯಿತು.
ಇಸ್ರೇಲ್ ಮತ್ತು ಅರ್ಜೆಂಟೀನಾದ ಉಭಯ ಪೌರತ್ವ ಹೊಂದಿದ ಇಯರ್ ಹಾರ್ನ್ (46), ಅಮೇರಿಕನ್ ಹಾಗೂ ಇಸ್ರೇಲಿಗ ಸಾಗಿ ಡೆಕೆಲ್ ಚೆನ್ (36) ಹಾಗೂ ರಷ್ಯನ್ ಇಸ್ರೇಲಿ ಅಲೆಕ್ಸಾಂಡರ್ (ಸೌಶಾ) ಟ್ರೌಫಾನೊವ್ (29) ಇವರನ್ನು ರೆಡ್ಕ್ರಾಸ್ ಇಸ್ರೇಲ್ ಸೇನೆಗೆ ಹಸ್ತಾಂತರಿಸಿತು. ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ಅವರ ಸಂಬಂಧಿಕರ ಜೊತೆ ಸೇರಿಸಲಾಗುವುದು. ಟೆಲ್ ಅವಿವಾ ಒತ್ತೆಯಾಳುಗಳ ಸ್ಕ್ವಾರ್ನಲ್ಲಿ ಮೂವರನ್ನು ರೆಡ್ಕ್ರಾಸ್ನಿಂದ ಹಸ್ತಾಂತರಿಸುವ ಪ್ರಕ್ರಿಯೆ ಸಾಗಿತ್ತು. ಕೈದಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಕೂಡ ಸಾಗಿದೆ.
ಇವರನ್ನು 2023ರ ಅಕ್ಟೋಬರ್ 7ರಂದು ಯುದ್ಧ ಆರಂಭವಾದಾಗ ಹಮಾಸ್ ಪಡೆ ಅಪಹರಣ ಮಾಡಿತ್ತು. 16 ತಿಂಗಳ ಬಳಿಕ ಬಿಡುಗಡೆಯಾದ ಮೂವರು ನೋಡಲು ಸೊರಗಿದಂತೆ ಕಂಡರೂ ದೈಹಿಕವಾಗಿ ಉತ್ತಮವಾಗಿರುವುದು ಕಂಡು ಬಂದಿತು. ನಾಲ್ಕು ವಾರಗಳ ಹಿಂದೆ ಉಂಟಾದ ಕದನವಿರಾಮದಿಂದ ಹಮಾಸ್ ಕೈದಿಗಳು ಮತ್ತು ಇಸ್ರೇಲ್ ಒತ್ತೆಯಾಳುಗಳ ಹಸ್ತಾಂತರ ಪ್ರಕ್ರಿಯೆ ಸಾಗಿದೆ. ಆದರೆ, ಇತ್ತೀಚಿಗೆ ಅದು ಉದ್ವಿಗ್ನಗೊಂಡಿದ್ದು, ಮತ್ತೆ ಯುದ್ಧದ ಭೀತಿ ಮೂಡಿಸಿದೆ ಎಂದು ವರದಿಯಾಗಿದೆ.
ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗಾಜಾದಿಂದ 2 ಮಿಲಿಯನ್ ಪ್ಯಾಲೆಸ್ತೇನಿಯರನ್ನು ಬೇರೆಡೆಗೆ ಸ್ಥಳಾಂತರಗೊಳಿಸುವ ಪ್ರಸ್ತಾಪವನ್ನು ಇರಿಸಿರುವುದು ಭವಿಷ್ಯದ ಕದನವಿರಾಮದ ಮೇಲೆ ಅನುಮಾನ ಹುಟ್ಟುಹಾಕಿದೆ.
ಆದರೆ, ಗುರುವಾರ ಮಾತನಾಡಿದ ಹಮಾಸ್, ಈಜಿಪ್ಟ್ ಮತ್ತು ಕತಾರ್ ಅಧಿಕಾರಿಗಳ ಜೊತೆ ಮಾತುಕತೆ ಬಳಿಕ ಮತ್ತಷ್ಟು ಒತ್ತೆಯಾಳುಗಳ ಬಿಡುಗಡೆ ಮಾಡಲು ಮುಂದಾಗಿದೆ. ಮಧ್ಯಸ್ಥಗಾರರ ಗುಂಪು ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕುವ ಗಾಜಾದಲ್ಲಿ ಮತ್ತಷ್ಟು ಟೆಂಟ್, ವೈದ್ಯಕೀಯ ಪೂರೈಕೆ ಮತ್ತು ಇತರೆ ಅಗತ್ಯತೆಗಳನ್ನು ಒದಗಿಸುವ ಭರವಸೆ ನೀಡಿದರು.
ಜನವರಿ 19ರಿಂದ ಆರಂಭವಾದ ಕದನ ವಿರಾಮದ ಒಪ್ಪಂದದಂತೆ ನಡೆದ ಆರನೇ ಹಸ್ತಾಂತರ ಇದಾಗಿದೆ. ಇಲ್ಲಿಯವರೆಗೆ 21 ಒತ್ತೆಯಾಳುಗಳನ್ನು 730 ಪ್ಯಾಲೆಸ್ತೇನಿಯನ್ ಕೈದಿಗಳನ್ನು ಮೊದಲ ಹಂತದ ಒಪ್ಪಂದದಲ್ಲಿ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 42 ದಿನದಲ್ಲಿ 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಂದ ಮಾಡಲಾಗಿದೆ. (ಎಪಿ)
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಐಇಡಿ ಬಾಂಬ್ ಸ್ಫೋಟ; 9 ಕಾರ್ಮಿಕರ ಸಾವು
ಇದನ್ನೂ ಓದಿ: ಒತ್ತೆಯಾಳುಗಳ ಬಿಡದಿದ್ದರೆ ಯುದ್ಧ ಪುನಾರಂಭ: ಹಮಾಸ್ಗೆ ಇಸ್ರೇಲ್ ಪ್ರಧಾನಿ ಎಚ್ಚರಿಕೆ