ಬೆಂಗಳೂರು: ''ರಾಜ್ಯದಲ್ಲಿ ಕೃಷ್ಣ, ಕಾವೇರಿ ಮತ್ತು ಗೋದಾವರಿ ನದಿ ಜೋಡಣೆಗಾಗಿ ಎಲ್ಲರೂ ಧ್ವನಿ ಎತ್ತಿ ಹೋರಾಟಕ್ಕೆ ಮುಂದಾಗಬೇಕಿದೆ'' ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಕರೆ ನೀಡಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ರಾಜ್ಯಸಭೆಯಲ್ಲಿ ಗೋದಾವರಿ, ಕೃಷ್ಣ, ಕಾವೇರಿ ನದಿ ಜೋಡಣೆ ಬಗ್ಗೆ ತಮಿಳುನಾಡಿನ ರಾಜ್ಯಸಭಾ ಸದಸ್ಯರು ಸೇರಿದಂತೆ ಎಲ್ಲರೂ ಧ್ವನಿ ಎತ್ತಿದ್ದೇವೆ. ಗೋದಾವರಿ, ಕೃಷ್ಣ, ಕಾವೇರಿ ನದಿ ಜೋಡಣೆ ಆಗಲೇಬೇಕಿದೆ'' ಎಂದು ಪ್ರತಿಪಾದಿಸಿದರು.
''ರಾಜ್ಯದ ಹಲವು ಜಿಲ್ಲೆಗಳು ನೀರಿನ ಬರ ಎದುರಿಸುತ್ತಿವೆ. ಇದನ್ನು ತಪ್ಪಿಸಲು ನದಿ ಜೋಡಣೆಯೇ ಮದ್ದು, ನಾನು ನೀರಾವರಿ ಸಚಿವನಾಗಿದ್ದಾಗಿನಿಂದಲೂ ನದಿ ಜೋಡಣೆ ಬಗ್ಗೆ ಹೋರಾಟ ನಡೆಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದೇನೆ'' ಎಂದು ಹೇಳಿದರು.
''ರಾಜ್ಯದಲ್ಲಿ ನದಿ ಜೋಡಣೆ ಸೇರಿದಂತೆ ನೀರಾವರಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪಕ್ಷಭೇದ ಮರೆತು ಎಲ್ಲ ಸಂಸದರು ಹೋರಾಟ ನಡೆಸಬೇಕಿದೆ. ಕೆಲವು ಸಂಸದರಿಗೆ ಹೋರಾಟ ಮಾಡುವ ಮನೋಭಾವನೆಯೇ ಇಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು. ಗೋದಾವರಿ-ಕೃಷ್ಣ-ಕಾವೇರಿ ನೀರಾವರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 ಟಿಎಂಸಿ ನೀರು ಕೊಡಬೇಕೆಂದು ದೇವೇಗೌಡರು ಪುನರುಚ್ಚರಿಸಿದ್ದಾರೆ.
''ಗೋದಾವರಿ-ಕೃಷ್ಣ-ಕಾವೇರಿ ಯೋಜನೆ ವಿಚಾರವಾಗಿ ನೀರು ಹೆಚ್ಚಳ ಮಾಡುವಂತೆ ನಾನು ಪ್ರಧಾನಿ, ಕೇಂದ್ರ ನೀರಾವರಿ ಸಚಿವರಿಗೆ 2022 ಮತ್ತು 2024ರಲ್ಲಿ ಪತ್ರ ಬರೆದಿದ್ದೆ. ಸದ್ಯ ನಮಗೆ 15.891 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಆದರೆ, ಈ ಪ್ರಮಾಣವನ್ನು 25 ಟಿಎಂಸಿಗೆ ಹೆಚ್ಚಿಸಬೇಕು'' ಎಂದು ಆಗ್ರಹಿಸಿದರು.
''ಸಂಸತ್ನಲ್ಲಿ ಈ ಬಗ್ಗೆ ನಾನು ಮಾತಾಡಿದ್ದೇನೆ. ಹೆಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಬಳಿ ಮಾತನಾಡುತ್ತಾರೆ. ಮೋದಿ ಅವರು ನಮಗೆ ಹತ್ತಿರ ಇರುವ ಕಾರಣ ಈ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಮಾಡುತ್ತೇನೆ. ನೀರಾವರಿ ವಿಚಾರವಾಗಿ ನಮ್ಮಲ್ಲಿ ಯಾವುದೇ ರಾಜಕೀಯ ಇಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಸಂಸದರು ಸೇರಿ ಎಲ್ಲರ ಜೊತೆ ನಾನು ನೀರಾವರಿ ವಿಚಾರವಾಗಿ ಮಾತನಾಡಲು ಸಿದ್ಧ. ನಮಗೆ ಸಮಸ್ಯೆ ಪರಿಹಾರ ಆಗಬೇಕು. ಇದಕ್ಕಾಗಿ ನನ್ನ ಹೋರಾಟ ಮುಂದುವರೆಸುತ್ತೇನೆ. ರಾಜ್ಯಕ್ಕೆ 25 ಟಿಎಂಸಿ ನೀರು ತರುವ ಪ್ರಯತ್ನ ಮಾಡುತ್ತೇನೆ'' ಎಂದು ಹೇಳಿದರು.
ಇನ್ನು ನಾಲ್ಕಾರು ವರ್ಷ ಬದುಕಿರುತ್ತೇನೆ : ''ನಾನು ಇನ್ನು ನಾಲ್ಕಾರು ವರ್ಷ ಬದುಕಿರುತ್ತೇನೆ. ಅಷ್ಟರಲ್ಲಿ ಈ ನೀರಾವರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ. ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ರಾಜ್ಯ ಸರ್ಕಾರದ ಜೊತೆಗೆ ಕೆಲಸ ಮಾಡುತ್ತೇನೆ. ಹಿಂದೊಮ್ಮೆ ಸಿದ್ದರಾಮಯ್ಯ ಜೊತೆ ಸಂಬಂಧ ಸರಿಯಿಲ್ಲದ ವೇಳೆಯಲ್ಲೂ ಸಿದ್ದರಾಮಯ್ಯ ಅವರೇ ನಮ್ಮ ಮನೆಗೆ ಬಂದಿದ್ದರು. ನೀರಾವರಿ ವಿಷಯ ಆದ ಹಿನ್ನೆಲೆಯಲ್ಲಿ ನಾನು ಅವರ ಜೊತೆ ಸಹಕಾರ ಕೊಟ್ಡಿದ್ದೆ'' ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿ : ''ಭದ್ರಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಬಬೇಕೆಂದು ನಾನೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ'' ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯದ ಪರವಾಗಿ, ಅನುದಾನ ಮತ್ತು ನೀರಾವರಿ ಯೋಜನೆ ಬಗ್ಗೆ ಮಾತನಾಡುತ್ತಿಲ್ಲವೆಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೌಡರು, ''ರಾಜ್ಯ ಸರ್ಕಾರದವರು ಅನೇಕ ಯೋಜನೆ ಮಾಡಿದ್ದೀರಿ. ನೀರಾವರಿಗೆ ಹಣ ಇಡಲಿಲ್ಲ. ಮಾಡಿದ ಯೋಜನೆಗೆ ಹಣ ಇಟ್ಟಿಲ್ಲ. ಅದರ ಬಗ್ಗೆ ನಾನು ಯಾಕೆ ಚರ್ಚೆ ಮಾಡಲಿ. ಅವರು ಏನು ಮಾಡುತ್ತಾರೋ ಮಾಡಲಿ'' ಎಂದು ನುಡಿದರು.
''ನಾನು ಭದ್ರಾ ಮೇಲ್ದಂಡೆಗೆ ಅನುಮತಿ ಕೊಡಿ ಅಂತ ನೀರಾವರಿ ಮಂತ್ರಿಗೆ ಪತ್ರ ಬರೆದಿದ್ದೇನೆ. ಭದ್ರಾ ಯೋಜನೆ ಬಗ್ಗೆಯೂ ನಾನು ಕುಳಿತುಕೊಳ್ಳುವುದಿಲ್ಲ. ಅದರ ಬಗ್ಗೆ ಹೋರಾಟ ಮಾಡುತ್ತೇನೆ'' ಎಂದು ಹೇಳಿದರು.
ಇದನ್ನೂ ಓದಿ: ದಲಿತ ಮುಖ್ಯಮಂತ್ರಿ ಪ್ರಸ್ತಾಪ ಅನಾವಶ್ಯಕ : ಸಚಿವ ಕೆ.ಎನ್. ರಾಜಣ್ಣ
''ಮಹದಾಯಿ ಯೋಜನೆ ವಿಚಾರ ಸುಪ್ರೀಂ ಕೋರ್ಟ್ನಲ್ಲಿದ್ದು, ಯೋಜನೆಗೆ ಗೋವಾ ವಿರೋಧ ಮಾಡಿದೆ. ಗೋವಾ ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿದೆ. ನಮ್ಮ ರಾಜ್ಯ ಸರ್ಕಾರ ಪ್ರತಿಯಾಗಿ ನೀರು ಬೇಕು ಅಂತ ಅರ್ಜಿ ಹಾಕಿದೆ. ಮಹದಾಯಿ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಪ್ರಧಾನಿ ಮೋದಿ ಅವರು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಅಧಿಕಾರಿಗಳು ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಬೇಕು. ಅದಕ್ಕೂ ನಾನು ಹೋರಾಟ ಮಾಡುತ್ತೇನೆ'' ಎಂದು ಹೇಳಿದರು.
ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ''ಯಾವ ದೃಷ್ಟಿಯಿಂದ ಹೇಳಿದ್ದೀನಿ ಅದು ಚರ್ಚೆ ಬೇಡ. ಗೋದಾವರಿ, ಕೃಷ್ಣ ಕಾವೇರಿ ಯೋಜನೆ 25 ಟಿಎಂಸಿ ನೀರನ್ನು ತರುವುದಕ್ಕೆ ಹೋರಾಟ ಮಾಡೋಣ'' ಎಂದು ದೇವೇಗೌಡರು ಕರೆ ನೀಡಿದರು.
ಬೃಹತ್ ಜೆಡಿಎಸ್ ಸಮಾವೇಶ ಮಾಡಲು ತೀರ್ಮಾನ : ''ಮೇ ತಿಂಗಳಲ್ಲಿ ಹೆಚ್.ಡಿ. ಕುಮಾರಸ್ವಾಮಿ ದೊಡ್ಡ ಸಮಾವೇಶ ಮಾಡುವುದಕ್ಕೆ ತೀರ್ಮಾನಿಸಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ನವರು ಸಮಾವೇಶ ಮಾಡಿದ್ದರು. ಅದೇ ರೀತಿ ಕಾರ್ಯಕ್ರಮ ಮಾಡುವುದಕ್ಕೆ ಮಾರ್ಚ್ 6ರಂದು ಪೂರ್ವಭಾವಿ ಸಭೆ ಮಾಡಲು ತೀರ್ಮಾನಿಸಿದ್ದೇವೆ. ಕುಮಾರಸ್ವಾಮಿ ನೇತೃತ್ವದಲ್ಲಿ ನಮ್ಮ ಪಕ್ಷದ ನಾಯಕರ ಸಭೆ ಕರೆಯಲಾಗಿದೆ. ತುಮಕೂರಿನಲ್ಲಿ ಸಮಾವೇಶ ಮಾಡಬೇಕೋ, ಮಂಡ್ಯ, ತುಮಕೂರು ಮಧ್ಯೆ ಮಾಡಬೇಕೋ ಚರ್ಚೆ ನಡೆಯಲಿದೆ'' ಎಂದು ತಿಳಿಸಿದರು.
ಇದನ್ನೂ ಓದಿ: ಉದಯಗಿರಿ ಪ್ರಕರಣದ ತಪ್ಪಿತಸ್ಥರು ಯಾರೇ ಇದ್ರೂ ಮುಲಾಜಿಲ್ಲದೆ ಕ್ರಮ ಜರುಗಿಸಿ: ಸಿಎಂ