ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)17 ನೇ ಆವೃತ್ತಿಯ ಕ್ವಾಲಿಫೈಯರ್ 2 ಪಂದ್ಯ ಇಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ.
ಈ ಪಂದ್ಯದಲ್ಲಿ ಉಭಯ ತಂಡಗಳ ನಾಲ್ವರು ಆಟಗಾರರು ತಮ್ಮ ಹೆಸರಿನಲ್ಲಿ ದಾಖಲೆ ನಿರ್ಮಿಸುವ ಮೂಲಕ ಇತಿಹಾಸ ಸೃಷ್ಟಿಸುವ ಅವಕಾಶ ಹೊಂದಿದ್ದಾರೆ. ಹೌದು, ಇಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಹೆನ್ರಿಚ್ ಕ್ಲಾಸೆನ್ ಮತ್ತು ಜಯದೇವ್ ಉನದ್ಕತ್ ಹಾಗೂ ರಾಜಸ್ಥಾನ ರಾಯಲ್ಸ್‌ನ ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಹಾಲ್ಗೆ ತಮ್ಮ ಹೆಸರಿನಲ್ಲಿ ದಾಖಲೆ ನಿರ್ಮಿಸುವ ಸುವರ್ಣಾವಕಾಶ ಒದಗಿ ಬಂದಿದೆ.
ಯಾವ ಆಟಗಾರ ಯಾವ ದಾಖಲೆ ಬರೆಯಲಿದ್ದಾರೆ?:
- ಐಪಿಎಲ್‌ನಲ್ಲಿ ಒಟ್ಟು 99 ವಿಕೆಟ್ ಪಡೆದಿರುವ ಸನ್‌ರೈಸರ್ಸ್ ಹೈದರಾಬಾದ್ ವೇಗದ ಬೌಲರ್ ಜಯದೇವ್ ಉನದ್ಕತ್ ಇಂದಿನ ಪಂದ್ಯದಲ್ಲಿ ಒಂದು ವಿಕೆಟ್ ಪಡೆದರೆ 100 ವಿಕೆಟ್ ಗಳಿಸಿದ ಶ್ರೇಯಕ್ಕೆ ಭಾಜನರಾಗಲಿದ್ದಾರೆ.
- ಕ್ಲಾಸೆನ್ ಇದುವರೆಗೆ ಒಟ್ಟು 927 ರನ್ ಗಳಿಸಿದ್ದಾರೆ. ಅವರು ತಮ್ಮ 1000 ರನ್‌ಗಳನ್ನು ಪೂರ್ಣಗೊಳಿಸಲು ಕೇವಲ 73 ರನ್‌ಗಳ ಅಗತ್ಯವಿದೆ. ಈ ಪಂದ್ಯದಲ್ಲಿ ಕ್ಲಾಸೆನ್ 73 ರನ್ ಗಳಿಸಿದರೆ ಅವರು ಐಪಿಎಲ್‌ನಲ್ಲಿ ಸಾವಿರ ರನ್ ಪೂರ್ಣಗೊಳಿಸಿದ ಹಿರಿಮೆಗೆ ಪಾತ್ರರಾಗಲಿದ್ದಾರೆ.
- ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಆಫ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಕೂಡ ತಮ್ಮ ಹೆಸರಿನಲ್ಲಿ ದಾಖಲೆ ಬರೆಯುವ ಅವಕಾಶವನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 47 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಇನ್ನು 3 ಕ್ಯಾಚ್ ಹಿಡಿದರೆ ಐಪಿಎಲ್ ಇತಿಹಾಸದಲ್ಲಿ 50 ಕ್ಯಾಚ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
- ಈ ಪಂದ್ಯದಲ್ಲಿ ಯುಜುವೇಂದ್ರ ಚಹಾಲ್ ಇಂದಿನ ಪಂದ್ಯದಲ್ಲಿ 2 ವಿಕೆಟ್ ಪಡೆದರೆ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ. ಚಹಾಲ್ ಐಪಿಎಲ್ ನಲ್ಲಿ ರಾಜಸ್ಥಾನ ಪರ ಇದುವರೆಗೆ ಒಟ್ಟು 66 ವಿಕೆಟ್ ಪಡೆದಿದ್ದಾರೆ. ಪ್ರಸುತ್ತ ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಶೇನ್ ವ್ಯಾಟ್ಸನ್ 67 ವಿಕೆಟ್‌ಗಳೊಂದಿಗೆ ರಾಜಸ್ಥಾನ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಇದನ್ನೂ ಓದಿ:ಇಂದು IPL ಕ್ವಾಲಿಫೈಯರ್ 2: ಹೈದರಾಬಾದ್ vs ರಾಜಸ್ಥಾನ್ ಫೈಟ್; ಯಾರಿಗೆ ಫೈನಲ್ ಟಿಕೆಟ್? - IPL Qualifier 2