ಡೆಹ್ರಾಡೂನ್, ಉತ್ತರಾಖಂಡ:'ಕ್ರಿಕೆಟ್ ದೇವರು' ಎಂದೇ ಖ್ಯಾತಿಯಾದ ಸಚಿನ್ ತೆಂಡೂಲ್ಕರ್ ಅವರು ಈಚೆಗೆ ಉತ್ತರಾಖಂಡಕ್ಕೆ ಭೇಟಿ ನೀಡಿದಾಗ ಅವರೇ ಪಕೋಡಾ ತಯಾರಿಸಿ, ಪತ್ನಿ ಅಂಜಲಿಗೆ ತಿನ್ನಿಸಿದ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಜೊತೆಗೆ ಟ್ರಕ್ಕಿಂಗ್, ಪ್ರವಾಸ, ಫ್ರಾಂಚೈಸಿಗಳ ಜೊತೆಗೆ ನಂಟು ಸೇರಿದಂತೆ ಹಲವು ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ. ಸದ್ಯ ಅವರು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ದಿನ ಬಿಡುವು ಮಾಡಿಕೊಂಡು ಅವರು ಉತ್ತರಾಂಖಡದ ಪ್ರಸಿದ್ಧ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು.
ಗರಿಗರಿ ಪಕೋಡಾ ತಯಾರಿ:ಕುಟುಂಬ ಸಮೇತ ಉತ್ತರಾಖಂಡ ಪ್ರಸಿದ್ಧ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿರುವ ಸಚಿನ್ ತೆಂಡೂಲ್ಕರ್ ಅವರು ಮೊದಲ ದಿನ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಿದರು. ಎರಡನೇ ದಿನ ಭಾರಿ ಮಳೆ ಕಾರಣ ಜಂಗಲ್ ಸಫಾರಿ ರದ್ದಾಯಿತು. ಇದರಿಂದ ಅವರು ತಾವಿದ್ದ ಅತಿಥಿ ಗೃಹದಲ್ಲೇ ಉಳಿದುಕೊಳ್ಳಬೇಕಾಯಿತು.
ಗೆಸ್ಟ್ ಹೌಸ್ನಲ್ಲಿದ್ದ ಸಿಬ್ಬಂದಿ ಜೊತೆಗೆ ಕಾಲ ಕಳೆದ ಸಚಿನ್ ಅವರೊಂದಿಗೆ ಸೇರಿಕೊಂಡು ಗರಿಗರಿ ಪಕೋಡಾ ಕೂಡ ತಯಾರಿಸಿದ್ದಾರೆ. ಅಲ್ಲಿದ್ದ ಅಡುಗೆಯವರ ಬಳಿ ಪಕೋಡಾ ಮಾಡುವ ರೆಸಿಪಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಸಚಿನ್ ಅವರೇ ಪಕೋಡವನ್ನು ಕರಿದು ಪತ್ನಿ ಅಂಜಲಿ ಅವರಿಗೆ ತಿನ್ನಿಸಿದರು. ಅಂಜಲಿ ಅವರು ಪಕೋಡಾದ ರುಚಿ ನೋಡಿ ಚೆನ್ನಾಗಿವೆ ಎಂದು ಹೊಗಳುತ್ತಿರುವುದು ವಿಡಿಯೋದಲ್ಲಿದೆ.
ಫೇಸ್ಬುಕ್ನಲ್ಲಿ ವಿಡಿಯೋ ಶೇರ್:ಪತ್ನಿ ಅಂಜಲಿ ಜೊತೆ ಸೇರಿಕೊಂಡು ತಾವೇ ಪಕೋಡಾ ತಯಾರಿಸಿದ ವಿಡಿಯೋವನ್ನು ಸಚಿನ್ ತೆಂಡೂಲ್ಕರ್ ಅವರು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. "ಮೊದಲ ದಿನದ ಸಫಾರಿಯಲ್ಲಿ ಕಾಡಿನಲ್ಲಿ ಸಂಚರಿಸಿ ವನ್ಯಜೀವಿಗಳನ್ನು ವೀಕ್ಷಿಸಿದೆವು. ಎರಡನೇ ದಿನ ಮಳೆ ಕಾರಣ ಸಫಾರಿ ರದ್ದಾಯಿತು. ಹೀಗಾಗಿ ಅಡುಗೆ ಮನೆಯಲ್ಲಿ ವಿಶೇಷ ರೆಸಿಪಿ ತಯಾರಿಸಿದೆವು" ಎಂದು ಅವರು ತಿಳಿಸಿದ್ದಾರೆ.
ಸಚಿನ್ ಮುಂಬೈ ತಂಡದ ಮೆಂಟರ್:ಸಚಿನ್ ಕ್ರಿಕೆಟ್ಗೆ ನಿವೃತ್ತಿ ಹೇಳಿದರೂ ಅವರ ಅನುಭವವನ್ನು ಬಳಸಿಕೊಳ್ಳಲು ಮುಂಬೈ ಇಂಡಿಯನ್ಸ್ ತಂಡ ಅವರನ್ನು ಮೆಂಟರ್ ಆಗಿ ನೇಮಿಸಿಕೊಂಡಿದೆ. ಐಪಿಎಲ್ನಲ್ಲಿ ತಂಡಕ್ಕೆ ಅಗತ್ಯವಾಗಿ ಬೇಕಿದ್ದ ಮಾರ್ಗದರ್ಶನ ಅವರು ನೀಡುತ್ತಿದ್ದಾರೆ. ಸದ್ಯ ನಡೆಯುತ್ತಿರುವ ಆವೃತ್ತಿಯಲ್ಲಿ ಮುಂಬೈ ತಂಡ ಅಷ್ಟೇನೂ ಉತ್ತಮ ಪ್ರದರ್ಶನ ತೋರುತ್ತಿಲ್ಲ. ಆಡಿರುವ 6 ಪಂದ್ಯಗಳಲ್ಲಿ ನಾಲ್ಕು ಸೋತು, 2 ರಲ್ಲಿ ಮಾತ್ರ ಗೆದ್ದಿದೆ.
ಇದನ್ನೂ ಓದಿ:'ದೇಶಿ ಪಂದ್ಯಾವಳಿಗಳು ರಾಷ್ಟ್ರೀಯ ಆಟಗಾರರಿಗೆ ಮೂಲಭೂತ ಅಂಶಗಳನ್ನು ಮರುಶೋಧಿಸಲು ಅವಕಾಶ ನೀಡುತ್ತದೆ'