ಕರ್ನಾಟಕ

karnataka

ETV Bharat / sports

ವಿರಾಟ್ ರೂಪ ತೋರಿದ​ ಕೊಹ್ಲಿ: ಎದುರಾಳಿ ರಾಜಸ್ಥಾನಕ್ಕೆ 184 ರನ್​ಗಳ ಟಾರ್ಗೆಟ್​ - IPL 2024

ರಾಜಸ್ಥಾನ​ ರಾಯಲ್ಸ್ ತಂಡಕ್ಕೆ 184 ರನ್​ಗಳ ಟಾರ್ಗೆಟ್​ ಅನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದೆ.

ರಾಜಸ್ತಾನ- ಬೆಂಗಳೂರು
ರಾಜಸ್ತಾನ- ಬೆಂಗಳೂರು

By ETV Bharat Karnataka Team

Published : Apr 6, 2024, 7:28 PM IST

Updated : Apr 6, 2024, 9:49 PM IST

ಜೈಪುರ್​(ರಾಜಸ್ಥಾನ) :ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿಯ ಶತಕದ ಬಲದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎದುರಾಳಿ ರಾಜಸ್ಥಾನ ರಾಯಲ್ಸ್​ ಗೆ 184 ರನ್​ಗಳ ಗುರಿ ನೀಡಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಆರ್​ಸಿಬಿ ಮತ್ತು ಆರ್​ಆರ್​ ನಡುವೆ ಮೆಗಾ ಫೈಟ್ ನಡೆಯುತ್ತಿದೆ.

ಮೊದಲು ಟಾಸ್​ ಗೆದ್ದಿರುವ ರಾಜಸ್ಥಾನ್​ ನಾಯಕ ಸಂಜು ಸ್ಯಾಮ್ಸನ್​ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಆರ್​ಸಿಬಿ ಪರ ಬ್ಯಾಟಿಂಗ್​ ಆಡಲು ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ರನ್​ ಮಷಿನ್​ ಖ್ಯಾತಿಯ ವಿರಾಟ್ ಕೊಹ್ಲಿ ಆಗಮಿಸಿದರು. ಈ ಜೋಡಿ ಶುರುವಿನಿಂದಲೇ ರಾಜಸ್ಥಾನ ಬೌಲರ್ಸ್​ಗಳನ್ನು ದಂಡಿಸಿದರು. ವಿಕೆಟ್​ ಕಳೆದುಕೊಳ್ಳದೆ ತಾಳ್ಮೆಯ ಆಟವಾಡಿದ ಡು ಪ್ಲೆಸಿಸ್ ಮತ್ತು ಕೊಹ್ಲಿ ಶತಕದ ಜೊತೆಯಾಟವಾಡಿದರು.

ಕಳೆದ ನಾಲ್ಕು ಪಂದ್ಯಗಳಿಂದ ರನ್​ಗಳಿಸಲು ಪರದಾಟ ನಡೆಸುತ್ತಿದ್ದ ಡು ಪ್ಲೆಸಿಸ್ ಅವರು ರಾಜಸ್ಥಾನ ಎದುರು ತಮ್ಮ ಫಾರ್ಮ್​ ಕಂಡುಕೊಂಡರು. 33 ಎಸೆತಗಳಲ್ಲಿ ತಲಾ 2 ಸಿಕ್ಸರ್, ಬೌಂಡರಿಗಳೊಂದಿಗೆ 44 ರನ್​ ಕಲೆ ಹಾಕಿದರು. ಇತ್ತ ಟೂರ್ನಿ ಆರಂಭದಿಂದಲೇ ತನ್ನಲ್ಲೇ ಆರೆಂಜ್​ ಕ್ಯಾಪ್​ ಉಳಿಸಿಕೊಂಡಿರುವ ಕೊಹ್ಲಿ ಕೂಡ ಆಕರ್ಷಕ ಹೊಡೆತಗಳನ್ನು ಹೊಡೆಯುವ ಮೂಲಕ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಆರ್​ಸಿಬಿ 125 ರನ್​ಗಳನ್ನು ಗಳಿಸುತ್ತಿದ್ದಂತೆ ಅರ್ಧಶತಕದ ಹೊಸ್ತಿಲಲ್ಲಿದ್ದ ಡು ಪ್ಲೆಸಿಸ್​ ಅವರನ್ನು ಯುಜ್ವೇಂದ್ರ ಚಹಾಲ್​ ತನ್ನ ಸ್ಪಿನ್​​ ಬೌಲಿಂಗ್​ ಮೂಲಕ ವಿಕೆಟ್​ ಉರುಳಿಸಿದರು. ನಂತರ ಬಂದ ಗ್ಲೆನ್​ ಮ್ಯಾಕ್ಸ್​ವೆಲ್​ ಕೂಡ ಮತ್ತೆ ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಕೇವಲ 1 ರನ್ಗೆ ತಮ್ಮ ಆಟವನ್ನು ನಿಲ್ಲಿಸಿದರು. ಇನ್ನು ರಾಜಸ್ಥಾನ ಎದುರು ಐಪಿಎಲ್​ ಪಾದಾರ್ಪಣೆ ಪಂದ್ಯವಾಡಿದ ಸೌರವ್ ಚೌಹಾಣ್ (9) ಕೂಡ ಒಂದು ಸಿಕ್ಸರ್​ ಹೊಡೆದು ವಿಕೆಟ್​ ಕಳೆದುಕೊಂಡರು.

ಆದರೆ ಆರಂಭಿಕನಾಗಿ ಬಂದಿದ್ದ ಕೊಹ್ಲಿ ಮಾತ್ರ ತನ್ನ ಅಬ್ಬರದ ಆಟವನ್ನು ನಿಲ್ಲಿಸಲಿಲ್ಲ. ಅರ್ಧಶತಕದವರೆಗೆ ಮಂದಗತಿ ಆಟವಾಡಿದ ಕೊಹ್ಲಿ ಕೊನೆ 5 ಓವರ್​ಗಳಲ್ಲಿ ಆರ್​ಆರ್​ ಬೌಲರ್ಸ್​ಗಳನ್ನು ಕಾಡಿದರು. ಈ ಮೂಲಕ ಐಪಿಎಲ್​ನಲ್ಲಿ ತಮ್ಮ 8ನೇ ಶತಕ ಸಿಡಿಸಿ ಸಂಭ್ರಮಿಸಿದರು. 72 ಎಸೆತಗಳನ್ನು ಎದುರಿಸಿದ ಕೊಹ್ಲಿ ಅಜೇಯ 113 ರನ್​ಗಳನ್ನು ಹೊಡೆದು ಆಟವನ್ನು ಮುಗಿಸಿದರು. ಈ ಇನ್ನಿಂಗ್ಸ್​ನಲ್ಲಿ 12 ಬೌಂಡರಿ ಸಮೇತ 4 ಭರ್ಜರಿ ಸಿಕ್ಸರ್ ​ಕೂಡಿವೆ. ಕೊನೆಯಲ್ಲಿ ಕ್ಯಾಮೆರಾನ್ ಗ್ರೀನ್ 6 ರನ್​ ಹೊಡೆದರು.

ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 183 ರನ್​ಗಳನ್ನು ಆರ್​ಸಿಬಿ ಕಲೆಹಾಕಿತು. ಆರ್​ಆರ್​ ಪರ ಯುಜ್ವೇಂದ್ರ ಚಹಾಲ್ 2 ವಿಕೆಟ್​ ಮತ್ತು ನಾಂದ್ರೆ ಬರ್ಗರ್ ಒಂದು ವಿಕೆಟ್​ ಪಡೆದರು.

ತಂಡಗಳು:ರಾಯಲ್ ಚಾಲೆಂಜರ್ಸ್ ಬೆಂಗಳೂರು:ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿ.ಕೀ), ಸೌರವ್ ಚೌಹಾಣ್, ರೀಸ್ ಟೋಪ್ಲಿ, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್

ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿ.ಕೀ ಮತ್ತು ನಾಯಕ), ರಿಯಾನ್ ಪರಾಗ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನಾಂದ್ರೆ ಬರ್ಗರ್, ಯುಜ್ವೇಂದ್ರ ಚಹಾಲ್ ​

ಇದನ್ನೂ ಓದಿ :ನೆಟ್ಸ್​​ನಲ್ಲಿ ಬೆವರಿಳಿಸಿದ ಸೂರ್ಯಕುಮಾರ್​: ಡೆಲ್ಲಿ ವಿರುದ್ಧ ಗೆಲುವು ತಂದುಕೊಡ್ತಾರಾ 'ಮಿಸ್ಟರ್​ 360°' - Suryakumar Yadav

Last Updated : Apr 6, 2024, 9:49 PM IST

ABOUT THE AUTHOR

...view details