ಹೈದರಾಬಾದ್: ಕೆಲವು ತಿಂಗಳಿಂದ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾದ ಪ್ರದರ್ಶನ ಗಮನಾರ್ಹವಾಗಿಲ್ಲ. ಅದರಲ್ಲೂ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನದಿಂದ ಭಾರತ ಸತತ ಸೋಲು ಅನುಭವಿಸುತ್ತಿದೆ. ಕಳೆದ ವರ್ಷ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್ವಾಶ್ ಆಗಿದ್ದ ಭಾರತ, ಇದೀಗ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 3-1 ಅಂತರದಿಂದ ಸೋಲನುಭವಿಸಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್ನಿಂದಲೂ ಹೊರಬಿದ್ದಿದೆ.
ಏತನ್ಮಧ್ಯೆ, ಭಾರತದ ಕಳಪೆ ಪ್ರದರ್ಶನದ ಬಗ್ಗೆ ಮಾಜಿ ಬೌಲರ್ ಹರ್ಭಜನ್ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ರಾಹುಲ್ ದ್ರಾವಿಡ್ ತಂಡದ ಕೋಚ್ ಆಗಿರುವವರೆಗೆ ತಂಡದಲ್ಲಿ ಎಲ್ಲವೂ ಚೆನ್ನಾಗಿತ್ತು. ಕಳೆದ ಆರು ತಿಂಗಳಲ್ಲಿ ಭಾರತದ ಪರಿಸ್ಥಿತಿ ಏನಾಗಿದೆ ನೋಡಿ ಎಂದರು. ಆಸ್ಟ್ರೇಲಿಯಾ ವಿರುದ್ಧ ಬ್ಯಾಟರ್ಗಳ ಪ್ರದರ್ಶನ ಗಮನಿಸಿದರೆ ಟೀಂ ಇಂಡಿಯಾ ಸ್ಟಾರ್ ಆಟಗಾರರ ಆಯ್ಕೆ ಸಂಸ್ಕೃತಿಯನ್ನು ಕೈಬಿಡಬೇಕು.
ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾಗ ಎಲ್ಲವೂ ಚೆನ್ನಾಗಿಯೇ ಇತ್ತು. ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆಲುವು ಸಾದಿಸಿದ್ದೆವು. ಇದಲ್ಲದೇ ಭಾರತ ಟಿ20 ವಿಶ್ವಕಪ್ ಕೂಡ ಗೆದ್ದುಕೊಂಡಿತು. ಆದರೆ ಅದರ ನಂತರ ಇದ್ದಕ್ಕಿದ್ದಂತೆ ಏನಾಯಿತು? ನನಗೇನೂ ಅರ್ಥವಾಗುತ್ತಿಲ್ಲ. ಕಳೆದ ಆರು ತಿಂಗಳಲ್ಲಿ ನಾವು ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಕಳೆದುಕೊಂಡಿದ್ದೇವೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಆಗಿದ್ದೇವೆ. ಈಗ ಆಸ್ಟ್ರೇಲಿಯಾದಲ್ಲಿ 3-1 ಅಂತರದಲ್ಲಿ ಸೋತಿದ್ದೇವೆ. ಇದೆಲ್ಲವನ್ನು ಗಮನಿಸಿದರೆ ಭಾರತ ತಂಡ ಕುಸಿದಂತೆ ಕಾಣುತ್ತಿದೆ' ಎಂದು ಹರ್ಭಜನ್ ಹೇಳಿದ್ದಾರೆ.
ಆಸೀಸ್ ಪ್ರವಾಸದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತೀವ್ರ ನಿರಾಸೆ ಮೂಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಭಜ್ಜಿ, 'ಪ್ರತಿಯೊಬ್ಬ ಆಟಗಾರನಿಗೂ ಒಂದಷ್ಟು ಜನಪ್ರಿಯತೆ ಮತ್ತು ಖ್ಯಾತಿ ಇರುತ್ತದೆ. ಆದಾಗ್ಯೂ, ಆಟಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ. ಈ ಹಿಂದೆ ಕಪಿಲ್‌ದೇವ್ ಮತ್ತು ಅನಿಲ್ ಕುಂಬ್ಳೆಯಂತಹ ಬಿಗ್ ಮ್ಯಾಚ್ ವಿನ್ನರ್‌ಗಳನ್ನು ತಂಡದಿಂದ ಕೈಬಿಟ್ಟ ಸಂದರ್ಭಗಳು ಇವೆ. ಇಂತಹ ಸಮಯದಲ್ಲಿ ಟೀಂ ಇಂಡಿಯಾ ಸ್ಟಾರ್ ಆಟಗಾರರ ಸಂಸ್ಕೃತಿಯನ್ನು ಕೈಬಿಡಬೇಕು ಎಂದರು.
ಅಭಿಮನ್ಯು ಈಶ್ವರನ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದು, ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಸರ್ಫರಾಜ್ ಖಾನ್ಗೂ ಇದೇ ಪರಿಸ್ಥಿತಿ. ಹಾಗಾಗಿ ಖ್ಯಾತಿ ಪಡೆದಿರುವ ಆಟಗಾರರಿಗಿಂತಲೂ ಟ್ಯಾಲೆಂಟ್ ಇರುವ ಆಟಗಾರರನ್ನು ಆಯ್ಕೆ ಮಾಡಬೇಕು ಎಂದು ಹರ್ಭಜನ್ ಸಲಹೆ ನೀಡಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ತೋರಿದ ಏಕೈಕ ಆಟಗಾರ ಎಂದರೇ ಅದು ಬುಮ್ರಾ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಬುಮ್ರಾ 5 ಪಂದ್ಯಗಳಲ್ಲಿ 32 ವಿಕೆಟ್‌ಗಳು ಉರುಳಿಸಿ ಅಗ್ರ ವಿಕೆಟ್ ಟೇಕರ್ ಆದರು. ಈ ಹಿನ್ನೆಲೆ ಬುಮ್ರಾ ಕುರಿತು ಪ್ರತಿಕ್ರಿಯೆ ನೀಡಿದ್ದ ಭಜ್ಜಿ, ಬುಮ್ರಾ ಇಲ್ಲದಿದ್ದರೆ ಭಾರತ ಈ ಸರಣಿಯನ್ನು 5-0 ಅಂತರದಿಂದ ಕಳೆದುಕೊಳ್ಳುತ್ತಿತ್ತು. ಅವರು ಪರ್ತ್ ಟೆಸ್ಟ್‌ನಲ್ಲಿ ನಾಯಕನಾಗಿ ಭಾರತವನ್ನು ಗೆಲ್ಲಿಸಿದರು. ಇದಷ್ಟೇ ಅಲ್ಲದೇ ಉಳಿದ ಪಂದ್ಯಗಳಲ್ಲೂ ಬೌಲರ್ ಆಗಿ ಉತ್ತಮ ಪ್ರದರ್ಶನ ತೋರಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಐರ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: RCB ಪ್ಲೇಯರ್ಗೆ ನಾಯಕತ್ವದ ಪಟ್ಟ!