Ind vs Pak Rohit Sharma : ಚಾಂಪಿಯನ್ಸ್ ಟ್ರೋಫಿಯಲ್ಲಿಂದು ಪಾಕಿಸ್ತಾನ ಮತ್ತು ಭಾರತದ ಮಧ್ಯೆ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ 1 ರನ್ ಗಳಿಸಿ ದಾಖಲೆ ಬರೆದಿದ್ದಾರೆ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿರುವ ಪಾಕಿಸ್ತಾನ ಸಾಮಾನ್ಯ ಗುರಿಯನ್ನು ಕಲೆಹಾಕಿ ಆಲೌಟ್ ಆಗಿದೆ. ಮೊದಲಿಗೆ ಉತ್ತಮ ಆರಂಭ ಪಡೆದಿದ್ದ ಪಾಕ್ 41 ರನ್ ವರೆಗೆ ಯಾವುದೇ ವಿಕೆಟ್ ನಷ್ಟವಿಲ್ಲದೆ ದೊಡ್ಡ ಸ್ಕೋರ್ನತ್ತ ದಾಪುಗಾಲು ಹಾಕಿತ್ತು. ಆದರೆ ಹಾರ್ದಿಕ್ ಪಾಂಡ್ಯ ಪಾಕ್ ಓಟಕ್ಕೆ ಬ್ರೇಕ್ ಹಾಕಿದರು.
23 ರನ್ ಗಳಿಸಿದ್ದ ಬಾಬರ್ ಅಜಮ್ ಅವರ ವಿಕೆಟ್ ಉರುಳಿಸಿದರು. ಇವರ ಬೆನ್ನಲ್ಲೇ ಇಮಾಮ್ ಉಲ್ ಹಕ್ ರನೌಟ್ ಬಲೆಗೆ ಬಿದ್ದರು. ಇದರಿಂದಾಗಿ ಪಾಕ್ 47 ರನ್ಗೆ 2 ವಿಕೆಟ್ ಕಳೆದುಕೊಂಡಿತು. ಬಳಿಕ ಸೌದ್ ಶಕೀಲ್ ಮತ್ತು ಮೊಹಮ್ಮದ್ ರಿಜ್ವಾನ್ ತಂಡದ ಪರ ಉತ್ತಮ ಬ್ಯಾಟಿಂಗ್ ಮಾಡಿದರು.
ಆದರೆ ರಿಜ್ವಾನ್ 46 ರನ್ಗಳಿಸಿದ್ದ ವೇಳೆ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು. ಇದರ ಬೆನ್ನಲ್ಲೇ ಸೌದ್ ಶಕೀಲ್ (62) ಅರ್ಧಶತಕ ಸಿಡಿಸಿ ಹೊರ ನಡೆದರು. ಇಲ್ಲಿಂದ ಪಾಕ್ ಪತನ ಆರಂಭವಾಯಿತು. 50 ರನ್ಗಳ ಅಂತರದಲ್ಲೇ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಅಂತಿಮವಾಗಿ 241 ರನ್ ಗಳಿಸಿತು.
ಭಾರತದ ಇನ್ನಿಂಗ್ಸ್ ಪ್ರಾರಂಭ : ಈ ಗುರಿಯನ್ನು ಬೆನ್ನತ್ತಿರುವ ಭಾರತ 31 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ (20), ಶಾಹಿನ್ ಶಾ ಆಫ್ರಿಧಿ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು. ಆದರೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ 1 ರನ್ ಗಳಿಸುತ್ತಿದ್ದಂತೆ ಅಪರೂಪದ ದಾಖಲೆ ಬರೆದಿದ್ದಾರೆ.
ದಾಖಲೆ ಬರೆದ ಹಿಟ್ಮ್ಯಾನ್ :ಆರಂಭಿಕ ಬ್ಯಾಟರ್ ಆಗಿ ವೇಗವಾಗಿ 9000 ರನ್ ಗಳಿಸಿದ ಬ್ಯಾಟರ್ ಆಗಿ ವಿಶ್ವದಾಖಲೆ ಬರೆದಿದ್ದಾರೆ. ಕೇವಲ 181 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಈ ಅನುಕ್ರಮದಲ್ಲಿ ಅವರು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (197 ಇನ್ನಿಂಗ್ಸ್) ದಾಖಲೆಯನ್ನು ಮುರಿದರು.
ಏಕದಿನ ಪಂದ್ಯಗಳಲ್ಲಿ 9000ರನ್ ಪೂರೈಸಿದ ಆರಂಭಿಕರು
- ರೋಹಿತ್ ಶರ್ಮಾ- (181 ಇನ್ನಿಂಗ್ಸ್)- 9001* ರನ್
- ಸಚಿನ್ ತೆಂಡೂಲ್ಕರ್ - (197 ಇನ್ನಿಂಗ್ಸ್) - 15310 ರನ್
- ಸೌರವ್ ಗಂಗೂಲಿ - (231 ಇನ್ನಿಂಗ್ಸ್) -9146 ರನ್
- ಕ್ರಿಸ್ ಗೇಲ್ - (246 ಇನ್ನಿಂಗ್ಸ್) - 10179 ರನ್
- ಆಡಮ್ ಗಿಲ್‌ಕ್ರಿಸ್ಟ್ - (253 ಇನ್ನಿಂಗ್ಸ್) - 9200 ರನ್
- ಸನತ್ ಜಯಸೂರ್ಯ - (268 ಇನ್ನಿಂಗ್ಸ್) - 12740 ರನ್
11 ಸಾವಿರ ರನ್ : ಏತನ್ಮಧ್ಯೆ, ಗುರುವಾರ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ 11,000 ರನ್‌ಗಳನ್ನು ಪೂರ್ಣಗೊಳಿಸಿದರು. ಒಟ್ಟಾರೆಯಾಗಿ, ರೋಹಿತ್ ಇದುವರೆಗೆ 262 ಇನ್ನಿಂಗ್ಸ್‌ಗಳಲ್ಲಿ 11049 ರನ್ ಗಳಿಸಿದ್ದಾರೆ. ಅದರಲ್ಲಿ 32 ಶತಕಗಳು ಮತ್ತು 57 ಅರ್ಧಶತಕಗಳು ಸೇರಿವೆ.
ಇದನ್ನೂ ಓದಿ:Ind vs Pak ಮೊದಲ ಓವರ್ನಲ್ಲೆ ಶಮಿ ಎಡವಟ್ಟು; ಫ್ಯಾನ್ಸ್ ಗರಂ!