ಹೈದರಾಬಾದ್:ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸೋಲಿನ ನಂತರ ಇದೀಗ ಭಾರತ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದ 4ನೇ ದಿನ ಆಲ್‌ರೌಂಡರ್ ರವೀಂದ್ರ ಜಡೇಜಾ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಆಟವಾಡಿ ಶತಕ ವಂಚಿತರಾದ ಜಡೇಜಾ, ಎರಡನೇ ಇನ್ನಿಂಗ್ಸ್‌ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆ ಎಂದೇ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ 2 ರನ್ ಗಳಿಸಿದ್ದ ಜಡೇಜಾ, ಬೇಡದ ರನ್‌ಗಾಗಿ ಓಡಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರಿಂದ ರನೌಟ್ ಆದರು. ಈ ವೇಳೆ ವೇಗವಾಗಿ ಓಡುವಾಗ ಮಂಡಿರಜ್ಜು ಗಾಯ ಅವರನ್ನು ಬಾಧಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಡೇಜಾ, 87 ರನ್ ಗಳಿಸಿ ತಂಡದ ಅಗ್ರ ಸ್ಕೋರರ್ ಎನಿಸಿದರು. ಆದರೆ 2ನೇ ಇನ್ನಿಂಗ್ಸ್‌ನಲ್ಲಿ ನಿರಾಸೆ ಮೂಡಿಸಿದರು. ಆದರೆ ಬೌಲಿಂಗ್ನಲ್ಲಿ ಮಿಂಚಿದ್ದಾರೆ.
ಜಡೇಜಾ ಗಾಯಗೊಂಡಿರುವುದು ಭಾರತ ತಂಡದ ಚಿಂತೆ ಹೆಚ್ಚಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗಿದು ತಲೆನೋವು ತಂದಿರಿಸಿದೆ.