ಬೆಂಗಳೂರು : ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿರುವ ನ್ಯಾಯಮೂರ್ತಿ ತಾಜ್ ಅಲಿ ಮೌಲಾಸಾಬ್ ನದಾಫ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಸೋಮವಾರ ಪ್ರಮಾಣವಚನ ಬೋಧಿಸಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹೈಕೋರ್ಟ್ನ ಎಲ್ಲ ನ್ಯಾಯಮೂರ್ತಿಗಳು ಹಾಜರಿದ್ದು, ವಕೀಲರ ಪರಿಷತ್ನ ಅಧ್ಯಕ್ಷ ವಿಶಾಲ್ ರಘು ನೂತನ ನ್ಯಾಯಮೂರ್ತಿಗೆ ಸ್ವಾಗತ ಕೋರಿದರು.
ನ್ಯಾಯಮೂರ್ತಿ ನದಾಫ್ ಅವರ ನೇಮಕಾತಿಯೊಂದಿಗೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಒಟ್ಟು 62 ಹುದ್ದೆಗಳು ಹೈಕೋರ್ಟ್‌ನಲ್ಲಿದ್ದು, ಇನ್ನೂ 12 ಹುದ್ದೆಗಳು ಖಾಲಿ ಇವೆ.
ನ್ಯಾ. ನದಾಫ್ ಪರಿಚಯ ; ನ್ಯಾಯಮೂರ್ತಿ ನದಾಫ್ ಅವರು 1976ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನಲ್ಲಿ ಜನಿಸಿದರು. ನ್ಯಾ. ನದಾಫ್ ಅವರ ತಂದೆ ಮೌಲಾಸಾಬ್ ನದಾಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಕಾರವಾರ ಜಿಲ್ಲೆಯ ಪೊಲೀಸ್ ಪ್ರಧಾನ ಕಚೇರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಬೆಂಗಳೂರಿನ ಚಾಮರಾಜಪೇಟೆಯ ಸೇಂಟ್ ಜೋಸೆಫ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದಿದ್ದು, ಪಿಯುಸಿಯನ್ನು ಕೆಎಲ್‌ಇ ಸೊಸೈಟಿಯ ನಿಜಲಿಂಗಪ್ಪ ಕಾಲೇಜಿನಲ್ಲಿ ಪೂರೈಸಿದ್ದರು. ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಬಿಎ, ಎಲ್‌ಎಲ್‌ಬಿ ಪದವಿಯನ್ನು ಪೂರೈಸಿದ್ದರು.
ಕೆಎಸ್‌ಬಿಸಿಯಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿದ್ದ ನ್ಯಾ. ನದಾಫ್ ಅವರು ವಕೀಲರಾದ ಕೆ ಅಪ್ಪಾರಾವ್, ಅಶೋಕ್ ಆರ್. ಕಲ್ಯಾಣಶೆಟ್ಟಿ ಅವರ ಕಚೇರಿಯಲ್ಲಿ ವೃತ್ತಿ ಬದುಕು ಆರಂಭಿಸಿದ್ದರು. ವಕೀಲ ಪಿ ಕೆ ಪೊನ್ನಪ್ಪ ಅವರ ಮಾರ್ಗದರ್ಶನದಲ್ಲಿ ವಿಚಾರಣಾಧೀನ ನ್ಯಾಯಾಲಯದಲ್ಲೂ ವಕೀಲಿಕೆ ಮಾಡಿದ್ದರು ಎಂದು ವಿಶಾಲ್ ರಘು ತಿಳಿಸಿದರು.
ಇದನ್ನೂ ಓದಿ : ಮೇ ಅಂತ್ಯದ ವೇಳೆಗೆ ಜಿ.ಪಂ, ತಾ.ಪಂ ಮೀಸಲಾತಿಗೆ ಅಧಿಸೂಚನೆ : ಹೈಕೋರ್ಟ್ಗೆ ಸರ್ಕಾರ ಮಾಹಿತಿ