ಹೈದರಾಬಾದ್: ಇತ್ತೀಚಿಗೆ ನಡೆದಿದ್ದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲನುಭವಿಸಿತು. ಆಸ್ಟ್ರೇಲಿಯಾದ ನೆಲದಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದ ಭಾರತ ತಂಡ ನಿರಾಸೆ ಅನುಭವಿಸಿತು.
ಭಾರತದ ಈ ಸೋಲಿಗೆ ಸ್ಟಾರ್ ಆಟಗಾರರ ಕಳಪೆ ಫಾರ್ಮ್, ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆಯ ಕೊರತೆ ಮತ್ತು ಇತರ ಬೌಲರ್‌ಗಳಿಂದ ಬುಮ್ರಾಗೆ ಸರಿಯಾದ ಬೆಂಬಲ ಸಿಗದಿರುವುದು ಕಾರಣವಾಗಿದೆ. ಒಂದು ವೇಳೆ ಬುಮ್ರಾ ಜೊತೆಗೆ ಮೊಹಮ್ಮದ್ ಶಮಿ ಇದ್ದಿದ್ದರೆ ಗೆಲುವಿನ ಫಲಿತಾಂಶವೇ ಬೇರೆ ಇರುತ್ತಿತ್ತು ಎಂಬ ಮಾತುಗಳು ಹರಿದಾಡುತ್ತಿವೆ. ಇದರ ನಡುವೆಯೇ ಶಮಿ ಕುರಿತು ರವಿಶಾಸ್ತ್ರಿ ಮಾತನಾಡಿದ್ದಾರೆ.
ಗಾಯದಿಂದ ಚೇತರಿಸಿಕೊಂಡ ಶಮಿ ದೇಶಿಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ. ಇದರೊಂದಿಗೆ ಆಸೀಸ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಲಿದ್ದಾರೆ ಎಂಬ ಪ್ರಚಾರವೂ ಹಬ್ಬಿತ್ತು. ಆದರೆ ಶಮಿ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ ಎಂದು ಬಿಸಿಸಿಐ ವೈದ್ಯಕೀಯ ತಂಡ ಹೇಳಿತು. ಆದರೆ ಶಮಿ ಬಗ್ಗೆ ಏಕೆ ಸರಿಯಾದ ಮಾಹಿತಿ ಕೊಡುತ್ತಿಲ್ಲ ಎಂದು ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಪ್ರಶ್ನಿಸಿದ್ದಾರೆ. ಹೆಚ್ಚಿನ ಅನುಭವವಿರುವ ಅವರನ್ನು ಆಸ್ಟ್ರೇಲಿಯಾಕ್ಕೆ ಕರೆದುಕೊಂಡು ಹೋಗಿದ್ದರೆ ಭಾರತ ತಂಡ ಬಲಿಷ್ಠವಾಗುತ್ತಿತ್ತು. ಬಳಿಕ ಅವರನ್ನು ಆಡಿಸುವುದಾ ಅಥವಾ ಇಲ್ಲವಾ ಎಂದು ನಿರ್ಧರಿಸಬೇಕಿತ್ತು.