ರೊಹ್ಟಸ್(ಬಿಹಾರ) : 17 ವರ್ಷದ ಹಿಂದೆ ಕೊಲೆಯಾಗಿದ್ದಾನೆ ಎಂದೇ ಭಾವಿಸಿದ್ದ ವ್ಯಕ್ತಿಯೊಬ್ಬ ಇದೀಗ ಅಚಾನಕ್ ಆಗಿ ಮನೆಗೆ ಮರಳಿ, ಕುಟುಂಬಸ್ಥರಲ್ಲಿ ಅಚ್ಚರಿಯ ಜೊತೆಗೆ ಭಯ ಮೂಡಿಸಿರುವ ಘಟನೆ ಬಿಹಾರದ ರೋಹ್ಟಸ್ ಜಿಲ್ಲೆಯಲ್ಲಿ ನಡೆದಿದೆ.
ಸದ್ಯ ಈ ಗ್ರಾಮದಲ್ಲಿ ಭಾರಿ ಚರ್ಚೆಯ ವಿಷಯವಾಗಿರುವ ಈ ವ್ಯಕ್ತಿ 17 ವರ್ಷದಿಂದ ಕಣ್ಮರೆಯಾಗಿದ್ದ. ಕುಟುಂಬಸ್ಥರು 2008ರಲ್ಲಿ ಅಕೊಡಿಕೊಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಸಂಬಂಧಿಕರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು.
ಕೊಲೆ ಪ್ರಕರಣದಲ್ಲಿ ವ್ಯಕ್ತಿಯ ನಾಲ್ವರು ಸಂಬಂಧಿಕರನ್ನು ಪೊಲೀಸರು ಬಂಧಿಸಿದ್ದು, ಅವರೆಲ್ಲರೂ ಎರಡು ವರ್ಷದ ಸೆರೆವಾಸ ಅನುಭವಿಸಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಕುರಿತು ಅರಿವಿರದ ವ್ಯಕ್ತಿ ಇದೀಗ ಕುಟುಂಬದ ಮುಂದೆ ಪ್ರತ್ಯಕ್ಷವಾಗಿದ್ದಾನೆ.
ಘಟನೆಯ ಪೂರ್ಣ ವಿವರ: ಇಲ್ಲಿನ ದೆವರಿಯಾ ಗ್ರಾಮದ ನಾಥುನಿ ಪಾಲ್ ಎಂಬ ವ್ಯಕ್ತಿ ದಿಢೀರ್ ಕಣ್ಮರೆಯಾಗಿದ್ದ. ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಂತರ ಅದನ್ನು ಕೊಲೆ ಪ್ರಕರಣವೆಂದು ಬದಲಿಸಿಕೊಂಡಿದ್ದರು. ಪಾಲ್‌ನನ್ನು ತಮ್ಮ ನಾಲ್ವರು ಸಂಬಂಧಿಕರು ತಮ್ಮ ಜಮೀನಿನಿಂದ ಕರೆದೊಯ್ದು ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಆ ಸಂದರ್ಭದಲ್ಲಿ ಪಾಲ್ ಮೃತದೇಹ ಸಿಕ್ಕಿರಲಿಲ್ಲ ಎಂದು ಪ್ರಕರಣದ ಕುರಿತು ಎಸ್ಎಚ್ಒ ಚಂದ್ರಶೇಖರ್ ಶರ್ಮಾ ಮಾಹಿತಿ ನೀಡಿದರು.
ಈ ಪ್ರಕರಣದಲ್ಲಿ ರತಿ ಪಾಲ್, ವಿಮಲೇಶ್ ಪಾಲ್, ಭಗ್ವಾನ್ ಪಾಲ್ ಮತ್ತು ಸತ್ಯೇಂದ್ರ ಪಾಲ್ ಎಂಬವರನ್ನು ಬಂಧಿಸಿ, ಎರಡು ವರ್ಷ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಬಳಿಕ ಅವರು ಜಾಮೀನಿನ ಮೇಲೆ ಹೊರಬಂದರು. ಕೋರ್ಟ್ನಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸಲಿಗೆ ಆಗಿದ್ದೇನು?: ನಾಥುನಿ ಪಾಲ್ 2008ರಂದು ಮನೆ ಬಿಟ್ಟು ತೆರಳಿದ್ದು, ಇಷ್ಟು ವರ್ಷ ಉತ್ತರ ಪ್ರದೇಶದ ಜಾನ್ಸಿಯ ವಗಬೊಂಡದಲ್ಲಿ ನೆಲೆಸಿದ್ದ. ಈತನ ಬಗ್ಗೆ ಅಲ್ಲಿನ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ನಡೆಸಿದಾಗ ಈತನ ಬಿಹಾರದವನೆಂಬುದು ಪೊಲೀಸ್ ದಾಖಲೆಯಲ್ಲಿ ಪತ್ತೆಯಾಗಿದೆ. ಪರಿಶೀಲನೆ ನಡೆಸಿದ ಬಳಿಕ ಇದೀಗ ಆತನ ಸ್ವಗ್ರಾಮಕ್ಕೆ ಕರೆ ತರಲಾಗಿದೆ.
ಇತ್ತ ನಾಥುನಿ ಪಾಲ್ ಮರಳುತ್ತಿದ್ದಂತೆ, ಮಾಡದ ಕೊಲೆಯಲ್ಲಿ ಶಿಕ್ಷೆ ಅನುಭವಿಸಿರುವ ಭಗವಾನ್ ಪಾಲ್ ಮಾತನಾಡಿ, ಇಷ್ಟು ವರ್ಷ ಜೈಲಿನಲ್ಲಿ ಕಳೆದ ಸಮಯ ಹಾಗೂ ಕೋರ್ಟ್ಗೆ ಅಲೆದ ವರ್ಷಗಳನ್ನು ಮರಳಿಸಲು ಸಾಧ್ಯವೇ? ಎಂದು ಆಕ್ರೋಶ ಹೊರಹಾಕಿದ್ದಾರೆ.(ಪಿಟಿಐ)
ಇದನ್ನೂ ಓದಿ: ಹಿಂದೂ ಧರ್ಮದ ಮೇಲಿನ ಪ್ರೀತಿ ನನ್ನನ್ನು ಮಹಾ ಕುಂಭಮೇಳಕ್ಕೆ ಕರೆ ತಂದಿತು: ಫ್ರೆಂಚ್ ಮಹಿಳೆ