ಹೈದರಾಬಾದ್: 2019ರಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಎಂ.ಎಸ್.ಧೋನಿ ಅವರನ್ನು ರನೌಟ್ ಮಾಡುವ ಮೂಲಕ ಭಾರತಕ್ಕೆ 3ನೇ ವಿಶ್ವಕಪ್ ತಪ್ಪಿಸಿದ್ದ ನ್ಯೂಜಿಲೆಂಡ್‌ನ ಸ್ಪೋಟಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. 38ರ ಹರೆಯದ ಗಪ್ಟಿಲ್ ಇನ್ಮುಂದೆ ದೇಶಿ ಲೀಗ್‌ಗಳಲ್ಲಿ ಮಾತ್ರ ಆಟವಾಡಲು ನಿರ್ಧರಿಸಿದ್ದಾರೆ.
2022ರಲ್ಲಿ ಗಪ್ಟಿಲ್ ಕೊನೆಯ ಬಾರಿಗೆ ಕಿವೀಸ್ ಪರ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಒಟ್ಟು 47 ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ ಹೆಚ್ಚಿನ ಯಶಸ್ಸು ಗಳಿಸಲಿಲ್ಲ. ಆದರೆ, ಏಕದಿನ ಸ್ವರೂಪದಲ್ಲಿ ಬೆಸ್ಟ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಒಟ್ಟು 198 ಏಕದಿನ ಪಂದ್ಯಗಳಲ್ಲಿ 7,346 ರನ್ ಗಳಿಸಿದ್ದಾರೆ. ಇದರಲ್ಲಿ 18 ಶತಕ ಹಾಗೂ 39 ಅರ್ಧಶತಕಗಳು ಸೇರಿವೆ.
ಟಿ20 ಸ್ವರೂಪದಲ್ಲೂ 122 ಪಂದ್ಯಗಳನ್ನಾಡಿರುವ ಗಪ್ಟಿಲ್, 2 ಶತಕ ಹಾಗೂ 18 ಅರ್ಧಶತಕ ಸೇರಿದಂತೆ 3,531 ರನ್ ಕಲೆಹಾಕಿದ್ದಾರೆ. ಚೊಚ್ಚಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದಲ್ಲದೆ, ಈ ಮಾದರಿಯಲ್ಲಿ ದ್ವಿಶತಕ ಬಾರಿಸಿದ ಏಕೈಕ ಕಿವೀಸ್ ಬ್ಯಾಟರ್ ಎಂಬ ದಾಖಲೆಯೂ ಗಪ್ಟಿಲ್ ಹೆಸರಲ್ಲಿದೆ.
ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳುವ ಸಂದರ್ಭದಲ್ಲಿ ಗಪ್ಟಿಲ್ ತಮ್ಮ ತಂಡದ ಸಹ ಆಟಗಾರರು, ಕೋಚಿಂಗ್ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಮಿಂಚಲು ಕುಟುಂಬ ಹಲವು ತ್ಯಾಗಗಳನ್ನು ಮಾಡಿದೆ. ಕ್ರಿಕೆಟ್‌ಗೆ ವಿದಾಯ ಹೇಳಿದರೂ ಜಗತ್ತಿನಾದ್ಯಂತ ನಡೆಯುವ ಡೊಮೆಸ್ಟಿಕ್ ಲೀಗ್‌ಗಳಲ್ಲಿ ಆಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಮೊಹಮ್ಮದ್ ಶಮಿಗೆ ಏನಾಗಿದೆ, ಎಲ್ಲಿದ್ದಾರೆ, ಬಿಸಿಸಿಐ ಏಕೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ: ರವಿಶಾಸ್ತ್ರಿ