ರಾಮನಗರ: ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿ ತಂದೆ ಹಾಗೂ ಇಬ್ಬರು ಪುಟ್ಟ ಮಕ್ಕಳು ಮೃತಪಟ್ಟ ಘಟನೆ ರಾಮನಗರದ ಅಚಲು ಗ್ರಾಮದ ಬಳಿ ಗುರುವಾರ ಬೆಳಗ್ಗೆ ನಡೆದಿದೆ.
ಕನಕಪುರ-ರಾಮನಗರ ಹೆದ್ದಾರಿಯಲ್ಲಿನ ಅಚಲು ಗ್ರಾಮದ ಸಮೀಪ ಟಿವಿಎಸ್ ಬೈಕ್‌ನಲ್ಲಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ತೆರಳುತ್ತಿದ್ದರು. ಈ ವೇಳೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಮಗ, ಮಗಳು ಹಾಗೂ ತಂದೆ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರ ಹೆಸರುಗಳು ಇನ್ನೂ ತಿಳಿದು ಬಂದಿಲ್ಲ. ಇವರು ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕರಾಗಿದ್ದು, ರಾಮನಗರ ತಾಲೂಕಿನ ದಾಸೇಗೌಡನದೊಡ್ಡಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಬೈಕ್ ಸವಾರನ ಪತ್ನಿಗೂ ಗಂಭೀರ ಗಾಯಗಳಾಗಿದೆ. ಅವರನ್ನು ಚಿಕಿತ್ಸೆಗಾಗಿ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪತ್ನಿ, ಮಗಳು ಸೇರಿ ಮೂವರನ್ನು ಕೊಂದು ಪೊಲೀಸ್ ಠಾಣೆಗೆ ಬಂದ ಆರೋಪಿ; ಬೆಚ್ಚಿಬಿದ್ದ ಬೆಂಗಳೂರು ಜನ
ಪತ್ಯೇಕ ಘಟನೆ- ವಿಜಯನಗರದಲ್ಲಿ ಮಹಿಳೆ ಸಾವು: ಕಾರು ಡಿಕ್ಕಿ ಹೊಡೆದು ಬೈಕಿನಲ್ಲಿ ತೆರಳುತ್ತಿದ್ದ ಮಹಿಳೆ ಸಾವನ್ನಪ್ಪಿದ್ದು, ಪತಿ (ಬೈಕ್ ಸವಾರ) ತೀವ್ರವಾಗಿ ಗಾಯಗೊಂಡ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೊರಬ ಕ್ರಾಸ್ ಬಳಿ ಸಂಭವಿಸಿದೆ.
ಕೂಡ್ಲಿಗಿ ಪಟ್ಟಣದ 6ನೇ ವಾರ್ಡ್ ನಿವಾಸಿ ಕರಿಯಮ್ಮ ಮಡಿವಾಳರ (43) ಅಪಘಾತದಲ್ಲಿ ಮೃತಪಟ್ಟ ಮಹಿಳೆಯಾಗಿದ್ದಾರೆ. ಗಾಯಗೊಂಡ ಪತಿ ಮಡಿವಾಳರ ಕೊತ್ಲೆಶ (49) ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿವರ: ಕೂಡ್ಲಿಗಿಯಿಂದ ಬೈಕ್‌ನಲ್ಲಿ ಪತಿ ಕೊಪ್ಲೇಶ್, ಪತ್ನಿ ಕರಿಯಮ್ಮ ಅವರು ಸಂಬಂಧಿಕರ ಊರಾದ ಗುಣಸಾಗರ ಗ್ರಾಮಕ್ಕೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹೋಗುತ್ತಿದ್ದಾಗ ಮೊರಬ ಕ್ರಾಸ್‌ನಲ್ಲಿ ಬೈಕ್ ನಿಧಾನಿಸಿ, ಬಲಕ್ಕೆ ತಿರುಗಲು ಮುಂದಾದಾಗ ಹಿಂದಿನಿಂದ ಅತಿವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕೆಳಗೆ ಬಿದ್ದ ಕರಿಯಮ್ಮ, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರನ್ನು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದ. ಬಳಿಕ ತನಿಖೆ ಕೈಗೊಂಡ ಪೊಲೀಸರು, ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಕೂಡ್ಲಿಗಿ ಪಿಎಸ್‌ಐ ಸಿ.ಪ್ರಕಾಶ್ ಹಾಗೂ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಾರಿನ ಚಾಲಕನ ವಿರುದ್ಧ ಮೃತಳ ಮಗ ಕಿರಣ್ ನೀಡಿದ ದೂರಿನಂತೆ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.