ಮುಂಬೈ:ಐಪಿಎಲ್ನ 14ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಆರು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 9 ವಿಕೆಟ್ ನಷ್ಟಕ್ಕೆ 126 ರನ್ಗಳಿಸಲಷ್ಟೇ ಶಕ್ತವಾಯಿತು. ಸಾಮಾನ್ಯ ಗುರಿಯನ್ನು ಬೆನ್ನಟ್ಟಿದ ಸಂಜು ಸ್ಯಾಮ್ಸನ್ ಪಡೆ ರಿಯಾನ್ ಪರಾಗ್ ಅವರ ಅಮೋಘ ಅರ್ಧಶತಕದ ನೆರವಿನಿಂದ 15.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ರಾಜಸ್ಥಾನ ತಂಡಕ್ಕೆ ಇದು ಸತತ ಮೂರನೇ ಗೆಲುವಾಗಿದ್ದರೆ, 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ಗೆ ಹ್ಯಾಟ್ರಿಕ್ ಸೋಲಾಗಿದೆ.
ತವರು ನೆಲದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹಾರ್ದಿಕ್ ಪಡೆ ಟ್ರೆಂಟ್ ಬೌಲ್ಟ್, ಯಜುವೇಂದ್ರ ಚಹಲ್ ಮತ್ತು ನಂಡ್ರೆ ಬರ್ಗರ್ ದಾಳಿಗೆ ಸಿಲುಕಿ ಅಲ್ಪಮೊತ್ತಕ್ಕೆ ಕುಸಿಯಿತು. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಬೌಲ್ಟ್ ಬೌಲಿಂಗ್ ದಾಳಿ ಸಿಲುಕಿ ಮೊದಲ ಓವರ್ನಲ್ಲೇ ರನ್ ಖಾತೆ ತೆರೆಯದೆ ಶೂನ್ಯಕ್ಕೆ ನಿರ್ಗಮಿಸಿದರು. ಬಳಿಕ ಬಂದ ನಮನ್ ಧಿರ್, ಡೆವಾಲ್ಡ್ ಬ್ರೇವಿಸ್ ಕೂಡ ಶೂನ್ಯಕ್ಕೆ ಬೌಲ್ಟ್ ಬಲೆಗೆ ಬಿದ್ದು ಹೊರ ನಡೆದರು. ಈ ಮೂಲಕ ಮೊದಲ ಮೂರು ಓವರ್ಗಳಲ್ಲೇ ಪ್ರಮುಖ ಬ್ಯಾಟರ್ಗಳು ಶೂನ್ಯಕ್ಕೆ ನಿರ್ಗಮಿಸುವ ಮೂಲಕ ತಂಡ ದೊಡ್ಡ ಆಘಾತ ಎದುರಿಸಿತು. ಮತ್ತೊಂದೆಡೆ 16ರನ್ ಗಳಿಸಿದ್ದ ಇಶಾನ್ ಕಿಶನ್ ಬರ್ಗರ್ಗೆ ವಿಕೆಟ್ ಒಪ್ಪಿಸಿದರು. ಇದರಿಂದ ತಂಡ 20 ರನ್ಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಐಪಿಎಲ್ನಲ್ಲಿ 2ನೇ ಬಾರಿಗೆ ಅತಿ ಕೆಟ್ಟ ಆರಂಭ ಕಂಡಿತು. ಆರ್ಸಿಬಿ ವಿರುದ್ಧ 7 ರನ್ಗೆ 4 ವಿಕೆಟ್ ಕಳೆದುಕೊಂಡಿತ್ತು.