ಫೆಬ್ರವರಿ ತಿಂಗಳಿನಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy) ಮತ್ತು ಇಂಗ್ಲೆಂಡ್ (England) ವಿರುದ್ಧದ ಮೂರು ಏಕದಿನ ಪಂದ್ಯಗಳಿಗಾಗಿ ಇಂದು ಭಾರತ ತಂಡ (Team India)ವನ್ನು ಪ್ರಕಟಿಸಲಾಗಿದೆ.
ಮುಂಬೈನಲ್ಲಿ ನಡೆದಿದ್ದ ಸುದ್ಧಿಗೋಷ್ಠಿಯಲ್ಲಿ ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಡಿಸಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು, ಯುವ ಆಟಗಾರ ಶುಭಮನ್ ಗಿಲ್ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಉಳಿದಂತೆ ಈ 15 ಸದಸ್ಯರ ತಂಡದಲ್ಲಿ ಮೊಹಮ್ಮದ್ ಶಮಿ ಅವರು ಸ್ಥಾನ ಪಡೆದುಕೊಂಡಿದ್ದು ಜೈಸ್ವಾಲ್ ಕೂಡ ಆಯ್ಕೆಯಾಗಿದ್ದಾರೆ.
ಜಸ್ಪ್ರೀತ್ ಬುಮ್ರಾ ಬದಲಿಗೆ ಇವರು ಕಣಕ್ಕೆ: ಆದರೆ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಹೊರಗುಳಿಯಲಿದ್ದು ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಹರ್ಷಿತ್ ರಾಣ ಆಡಲಿದ್ದಾರೆ ಎಂದು ಅಗರ್ಕರ್ ತಿಳಿಸಿದ್ದಾರೆ. ಫೆ.6 ರಿಂದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಇದರ ಬೆನ್ನಲ್ಲೆ ಭಾರತ ಫೆ.20 ರಿಂದ ಚಾಂಪಿಯನ್ಸ್ ಟ್ರೋಫಿ ಆಡಲಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದೊಂದಿಗೆ ಸೆಣಸಲಿದೆ.
ಸ್ಟಾರ್ ಬೌಲರ್ ಏಕೆ ಸೆಲೆಕ್ಟ್ ಮಾಡಿಲ್ಲ?: ಏತನ್ಮದ್ಯೆ, ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾದ ಸ್ಟಾರ್ ಬೌಲರ್ ಎನಿಸಿಕೊಂಡಿರುವ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ಅವರ ಸ್ಥಾನಕ್ಕೆ ಅರ್ಷದೀಪ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದರ ಬೆನ್ನಲ್ಲೆ ಅಭಿಮಾನಿಗಳು ಬೇಸರ ಹೊರಹಾಕಿದ್ದು, ಅರ್ಷದೀಪ್ಗೆ ಹೋಲಿಕೆ ಮಾಡಿದರೇ ಸಿರಾಜ್ಗೆ ಹೆಚ್ಚಿನ ಅನುಭವವಿದೆ ಮತ್ತು ವಿಕೆಟ್ ಪಡೆಯುವ ಸಾಮರ್ಥ್ಯ ಇದೆ ಎಂದಿದ್ದಾರೆ. ಅಲ್ಲದೇ ಅವರನ್ನು ತಂಡಕ್ಕೆ ಆಯ್ಕೆ ಮಾಡದಿರಲು ಕಾರಣ ಏನು ಎಂದು ಪತ್ರಕರ್ತರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿ ಆಯ್ಕೆ ಮಾಡದಿರಲು ಕಾರಣ ತಿಳಿಸಿದ್ದಾರೆ.
ಪ್ರಶ್ನೆಗೆ ರೋಹಿತ್ ಉತ್ತರಿಸಿದ್ದು ಹೀಗೆ: ಸಿರಾಜ್ ಅವರನ್ನು ತಂಡಕ್ಕೆ ಏಕೆ ಸೇರಿಸಿಕೊಂಡಿಲ್ಲ ಎಂದು ಪತ್ರಕರ್ತರು ಕೇಳಿದಕ್ಕೆ ಉತ್ತರಿಸಿದ ರೋಹಿತ್, ಪಂದ್ಯದಲ್ಲಿ ಹೊಸ ಮತ್ತು ಹಳೆಯ ಚೆಂಡಿನೊಂದಿಗೆ ಪ್ರಭಾವ ಬೀರುವ ಆಟಗಾರರನ್ನು ಪಂದ್ಯಾವಳಿಗೆ ಆಯ್ಕೆ ಮಾಡಲು ಬಯಸಿದ್ದೇವೆ. ಸಿರಾಜ್ ಉತ್ತಮ ಬೌಲರ್ ಹೌದು, ಆದರೆ ಅವರು ಹೊಸ ಚೆಂಡು ಇದ್ದಾಗ ಮಾತ್ರ ಉತ್ತಮ ಬೌಲಿಂಗ್ ಮಾಡುತ್ತಾರೆ. ಚೆಂಡು ಶೈನ್ ಕಳೆದುಕೊಂಡು ಹಳೆಯದಾದರೇ ಸಿರಾಜ್ ಪ್ರಭಾವ ಬೀರಲ್ಲ.
ಅರ್ಷದೀಪ್ ಆರಂಭಿಕ ಓವರ್‌ಗಳಲ್ಲಿ ಸ್ವಿಂಗ್ ಮತ್ತು ಡೆತ್ ಓವರ್‌ಗಳಲ್ಲಿ ಅಪಾಯಕಾರಿ ಬೌಲಿಂಗ್ ಮಾಡುತ್ತಾರೆ ವಿಕೆಟ್ಗಳನ್ನು ಉರುಳಿಸುತ್ತಾರೆ. ಅಲ್ಲದೇ ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಆದ್ರೆ ಸಿರಾಜ್ ಚೆಂಡು ಹಳೆಯದಾದ ಮೇಲೆ ಮಧ್ಯಮ ಮತ್ತು ಡೆತ್ ಓವರ್ನಲ್ಲಿ ಅಪಾಯಕಾರಿ ಬೌಲಿಂಗ್ ಮಾಡಲು ವಿಫಲರಾಗುತ್ತಾರೆ. ಇದೆ ಕಾರಣಕ್ಕೆ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದಲ್ಲದೇ ಗಾಯದಿಂದ ಬಳಲುತ್ತಿರುವ ಜಸ್ಪ್ರೀತ್ ಬುಮ್ರಾ ಅವರನ್ನು ಕೂಡ ಮೂರನೇ ವೇಗಿಯಾಗಿ ಇರಿಸಲಾಗಿದೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಒಂದೇ ಒಂದು ತಪ್ಪಿನಿಂದ ಚಾಂಪಿಯನ್ಸ್ ಟ್ರೋಫಿಯಿಂದಲೇ ಹೊರಬಿದ್ದ ವಿಕೆಟ್ ಕೀಪರ್!