ಬೆಂಗಳೂರು: ಅತ್ತೆಯನ್ನು ಸಾಯಿಸಲು ಮಾತ್ರೆ ಕೊಡುವಂತೆ ವೈದ್ಯರೊಬ್ಬರಿಗೆ ಮಹಿಳೆಯು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಈ ಸಂಬಂಧ ವೈದ್ಯರ ದೂರನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಅಸಲಿ ವಿಚಾರವನ್ನು ಬಯಲಿಗೆಳೆದಿದ್ದಾರೆ.
ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಪ್ಪ ಬಡಾವಣೆಯಲ್ಲಿ ವಾಸವಿರುವ ವೈದ್ಯ ಸುನಿಲ್ ಹೆಬ್ಬಿ ಎಂಬವರು ನೀಡಿದ ದೂರು ನೀಡಿದ ಮೇರೆಗೆ, ಕೊಳ್ಳೆಗಾಲ ಮೂಲದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ, ಮಹಿಳೆಯು ಮಾತ್ರೆಗಳನ್ನು ಕೇಳಿರುವುದು ಅತ್ತೆಗಲ್ಲ, ತನಗೆ ಎಂಬುದನ್ನು ಒಪ್ಪಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ನಗರದ ಮಾಕಳಿಯಲ್ಲಿ ವಾಸವಾಗಿದ್ದ ಮಹಿಳೆಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿ ಒಂದು ಮಗುವಿದೆ. ಗಂಡ ಕ್ಯಾಬ್ ಚಾಲಕರಾಗಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯು ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳಂತೆ. ಅಲ್ಲದೆ, ಒಮ್ಮೆ ಮನೆ ಬಿಟ್ಟು ಹೋಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗೂಗಲ್ ಮೂಲಕ ವೈದ್ಯ ಸುನಿಲ್ ಅವರ ನಂಬರ್ ಪಡೆದಿದ್ದ ಮಹಿಳೆಯು ಕಳೆದ ಸೋಮವಾರ ವೈದ್ಯರಿಗೆ ಮೇಸೆಜ್ ಮಾಡಿ ತನಗೆ ಅತ್ತೆ ಹಿಂಸೆ ಕೊಡುತ್ತಿದ್ದು, ಆಕೆಯನ್ನು ಸಾಯಿಸಲು ಎರಡು ಮಾತ್ರೆ ಕೊಡುವಂತೆ ಕೇಳಿದ್ದರು. ಇದಕ್ಕೆ ನಿರಾಕರಿಸಿದ ಸುನಿಲ್, ಪ್ರಾಣ ತೆಗೆಯುವ ವೈದ್ಯರಲ್ಲ, ಬದಲಾಗಿ ಜೀವ ಉಳಿಸುವ ವೈದ್ಯರೆಂದು ಹೇಳಿ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ವಾಟ್ಸ್ಆ್ಯಪ್ ಸಂದೇಶ ವೈರಲ್ ಆಗುತ್ತಿದ್ದಂತೆ ಮಹಿಳೆಯನ್ನು ಸಂಜಯನಗರ ಪೊಲೀಸರ ಮುಂದೆ ಆಕೆಯ ಪತಿಯೇ ಕರೆದುಕೊಂಡು ಬಂದಿದ್ದರು. ವಿಚಾರಣೆ ವೇಳೆ ಅತ್ತೆ, ಸೊಸೆ ನಡುವೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ. ಮಹಿಳೆಯು ಮಾನಸಿಕ ಖಿನ್ನತೆಯಿಂದ ಬಳುತ್ತಿದ್ದು, ಮಾತ್ರೆಗಳನ್ನು ಪಡೆದು ತಾನೇ ಸಾಯಲು ಮುಂದಾಗಿದ್ದೆ ಎಂದು ಮಹಿಳೆಯು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಾನಸಿಕ ಅಸ್ವಸ್ಥೆಯಾಗಿ ಬಳಲುತ್ತಿರುವ ಮಹಿಳೆಯನ್ನು ಕೌನ್ಸಿಲಿಂಗ್ಗೆ ಒಳಪಡಿಸಬೇಕು ಎಂದು ವೈದ್ಯ ಸುನಿಲ್ ಶಿಫಾರಸು ಮಾಡಿದ್ದಾರೆ.
ಈ ಬಗ್ಗೆ ವೈದ್ಯ ಸುನಿಲ್ ಹೆಬ್ಬಿ ಮಾತನಾಡಿ, ''ವಿಚಾರಣೆ ವೇಳೆ ಮಹಿಳೆಯು ಮಾನಸಿಕ ಅಸ್ವಸ್ಥೆಯಾಗಿದ್ದು, ಕುಟುಂಬಸ್ಥರು ಚಿಕಿತ್ಸೆ ಕೊಡಿಸುತ್ತಿರುವ ಬಗ್ಗೆ ಗೊತ್ತಾಗಿದೆ. ಮಾತ್ರೆ ಕೇಳಿದ್ದು ಅತ್ತೆಗಾಗಿ ಅಲ್ಲ, ಬದಲಾಗಿ ತಾನು ಸಾಯಲು ಮಾತ್ರೆ ಕೇಳಿದ್ದರು ಎಂಬುದನ್ನು ಪೊಲೀಸರು ಕಂಡುಕೊಂಡಿದ್ಧಾರೆ. ಇತ್ತೀಚಿನ ವರ್ಷಗಳಲ್ಲಿ ಶೇ.80ರಷ್ಟು ಜನರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಈ ಮಹಿಳೆಯೂ ಗೂಗಲ್ನಲ್ಲಿ ಸರ್ಚ್ ಮಾಡಿ, ಇನ್ ಸ್ಟಾಗ್ರಾಮ್ ಮೂಲಕ ನಂಬರ್ ಪಡೆದು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದಳು. ಆರಂಭದಲ್ಲಿ ತನಗೆ ಯಾರೋ ಟ್ರ್ಯಾಪ್ ಮಾಡುತ್ತಿರಬಹುದು ಎಂದು ಉಹಿಸಿ ಪೊಲೀಸರಿಗೆ ದೂರು ನೀಡಿದ್ದೆ. ಈ ಹಿಂದೆ ಒಮ್ಮೆ ಅಪರಿಚಿತರಿಂದ ಜೀವ ಬೆದರಿಕೆ ಕರೆ ಕೂಡ ಬಂದಿತ್ತು'' ಎಂದು ತಿಳಿಸಿದ್ಧಾರೆ.
ಇದನ್ನೂ ಓದಿ: ಬೆಂಗಳೂರು: 'ನನ್ನ ಅತ್ತೆ ಸಾಯಿಸಲು ಐಡಿಯಾ ಕೊಡಿ': ವೈದ್ಯನಿಗೆ ಮೆಸೇಜ್ ಕಳಿಸಿದ ಸೊಸೆ