ಬೆಂಗಳೂರು: ''ಶೋಕಾಸ್ ನೋಟಿಸ್ ಕಾಪಿ ಮಾಧ್ಯಮಗಳಿಗೆ ಕೊಟ್ಟಿರುವುದು ವಿಜಯೇಂದ್ರ. ನಾನು ಉತ್ತರ ಕೊಟ್ಟಿದ್ದೇನಾ, ಬಿಟ್ಟಿದ್ದಿನಾ ಎಂಬುದನ್ನು ವಿಜಯೇಂದ್ರ ಬಳಿಯೇ ಕೇಳಿ. ನನಗೆ ಮೇಲ್ಗೆ ನೋಟಿಸ್ ಬರುವುದು, ಅದು ಬಿಡುಗಡೆ ಆಗುತ್ತದೆ ಎಂದರೆ ಅದನ್ನು ವಿಜಯೇಂದ್ರ ಅವರೇ ಮಾಡಿದ್ದಾರೆ'' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಇಂದು ತಮಗೆ ಶೋಕಾಸ್ ನೋಟಿಸ್ ಬಂದಿರುವ ವಿಚಾರವಾಗಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ''ಈ ನೋಟಿಸ್ಗೆ ಉತ್ತರನೂ ಅವರೇ (ವಿಜಯೇಂದ್ರ) ಕೊಟ್ಟಿರಬೇಕಲ್ವಾ. ಅದನ್ನು ನೋಡಿ ಮಾಧ್ಯಮಗಳು ಯತ್ನಾಳ್ಗೆ ನೋಟಿಸ್ ಎಂದು ಸುದ್ದಿ ಹೊಡೆದೇ ಹೊಡಿದ್ರಿ. ನನಗೆ ಬರುವ ಮೊದಲೇ ನೋಟಿಸ್ ಲೀಕ್ ಆಯ್ತು, ಅದನ್ನು ಯಾರು ಮಾಡಿದರು?'' ಎಂದು ಪ್ರಶ್ನಿಸಿದರು.
ಇದನ್ನೂ ಓದಿ: 'ಎಐಸಿಸಿ ಹೊಸ ಕಚೇರಿ ನೋಡಲು ದೆಹಲಿಗೆ ಹೋಗಿದ್ದೆ, ಯಾವುದೇ ರಾಜಕೀಯ ಅಜೆಂಡಾ ಇರಲಿಲ್ಲ'
ನನಗೆ ಹೈಕಮಾಂಡ್ ಕ್ಯಾಕರಿಸಿ ಉಗಿದಿದೆ ಎಂದು ಒಂದು ಮಾಧ್ಯಮದಲ್ಲಿ ಸುದ್ದಿ ಆಯ್ತು: ''ನಾನೇನು ಟ್ವೀಟ್ ಮಾಡಿದ್ದೆ, ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂಬ ಬಗ್ಗೆ ಹೇಳಿದ್ದೆ. ಆದರೆ, ಯತ್ನಾಳ್ಗೆ ನೋಟಿಸ್ ಬಂದಿದೆ ಎಂಬ ಸುದ್ದಿಗಳು ಬರುತ್ತಿವೆ. ಯಾವ ಮೀಡಿಯಾದವರಲ್ಲಿ ನೋಟಿಸ್ ಕಾಪಿ ಇದೆ ಎಂಬುದನ್ನು ತೋರಿಸಿ. ನನಗೆ ಹೈಕಮಾಂಡ್ ಕ್ಯಾಕರಿಸಿ ಉಗಿದಿದೆ ಎಂದು ಒಂದು ಮಾಧ್ಯಮದಲ್ಲಿ ಸುದ್ದಿ ಆಯ್ತು. ಯಾವುದಾದರೂ ಶಿಸ್ತು ಸಮಿತಿ ಉಗಿಯುವ ರೀತಿಯಲ್ಲಿ ನೋಟಿಸ್ ಬಂದಿದೆಯಾ?'' ಎಂದು ಕಿಡಿಕಾರಿದರು.
ನಾವು ಬಡ ರಾಜಕಾರಣಿಗಳು, ವಿಜಯೇಂದ್ರ ತರ ಅಲ್ಲ: ''ವಿಜಯೇಂದ್ರ ಯಾರ್ರೀ?. ನನಗೆ ನೋಟಿಸ್ ಕೊಟ್ಟಿದ್ದಾರೆ. ಉತ್ತರ ಕೊಟ್ಟಿದ್ದೇನೆ ಎಂದು ಅವರಿಗೆ ಹೇಗೆ ಗೊತ್ತು?. ಅವರು ಏನು ಮ್ಯಾನೇಜ್ ಮಾಡ್ತಿದ್ದಾರೆ ಅಂತ ಗೊತ್ತು. ಹಿಂದೆ ಕೂಡ ಒಂದು ನೋಟಿಸ್ ಬಂದಿತ್ತು. ಆದರೆ ಬಿಜೆಪಿ ಲೆಟರ್ ಹೆಡ್ ಬೇರೆ ಇತ್ತು. ಇದೆಲ್ಲಾ ನಕಲಿ ನಾಟಕಗಳು, ಫೇಕ್ ನೋಟಿಸ್ ನಾಟಕ ಆಯ್ತು. ನಾವು ಬಡ ರಾಜಕಾರಣಿಗಳು, ವಿಜಯೇಂದ್ರ ತರ ಅಲ್ಲ. ನೋಟಿಸ್ ಬಗ್ಗೆ ನಿಮ್ಮ ಬಳಿ ದಾಖಲೆ ಇದೆಯಾ?. ಮತ್ತೆ ಏಕೆ ಸುದ್ದಿ ಮಾಡುತ್ತಿದ್ಧೀರಿ. ನನ್ನ ನೋಟಿಸ್ ಬಗ್ಗೆ ನಾನೇನೂ ಹೇಳಲ್ಲ'' ಎಂದರು.
ಇದನ್ನೂ ಓದಿ: ಸಿ.ಟಿ.ರವಿ-ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣ ಶೀಘ್ರದಲ್ಲೇ ಬಗೆಹರಿಯಲಿದೆ: ಬಸವರಾಜ್ ಹೊರಟ್ಟಿ