ಸ್ಟಾವಂಜರ್(ನಾರ್ವೆ):ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಗ್ನಾನಂದ ಇಲ್ಲಿ ನಡೆಯುತ್ತಿರುವ ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ತಮ್ಮ ಚೊಚ್ಚಲ ಕ್ಲಾಸಿಕಲ್ ಗೇಮ್ ಜಯ ಸಾಧಿಸಿದರು. ರ‍್ಯಾಪಿಡ್/ಎಕ್ಸಿಬಿಷನ್ ಗೇಮ್‌ಗಳಲ್ಲಿ ಈ ಹಿಂದೆ ಕಾರ್ಲ್‌ಸೆನ್‌ರನ್ನು ಕೆಲವು ಸಲ ಸೋಲಿಸಿರುವ 18 ವರ್ಷದ ಪ್ರಗ್ನಾನಂದ, ಮೂರು ಸುತ್ತುಗಳ ಬಳಿಕ 5.5 ಅಂಕಗಳೊಂದಿಗೆ ಮೇಲುಗೈ ಪಡೆದರು.
ಪ್ರಗ್ನಾನಂದ ಅವರು ಬಿಳಿ ಕಾಯಿಗಳೊಂದಿಗೆ ಆಡಿದ್ದು, ಅವರ ಗೆಲುವು ತವರಿನ ನೆಚ್ಚಿನ ಆಟಗಾರ ಕಾರ್ಲ್‌ಸೆನ್ ಅವರನ್ನು ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತಳ್ಳಿತು. ಸ್ಲೋ ಚೆಸ್ ಎಂದೂ ಕರೆಯಲ್ಪಡುವ ಕ್ಲಾಸಿಕಲ್ ಚೆಸ್, ಆಟಗಾರರು ತಮ್ಮ ಚಲನೆಗಳನ್ನು ಮಾಡಲು ಗಮನಾರ್ಹ ಸಮಯಾವಕಾಶ ಸಿಗುತ್ತದೆ. ಸಾಮಾನ್ಯವಾಗಿ ಕನಿಷ್ಠ ಒಂದು ಗಂಟೆ ಅವಕಾಶ ಇರುತ್ತದೆ. ಈ ಸ್ವರೂಪದಲ್ಲಿ ಕಾರ್ಲ್‌ಸೆನ್ ಮತ್ತು ಪ್ರಗ್ನಾನಂದ ನಡುವಿನ ಈ ಹಿಂದಿನ ಮೂರು ಮುಖಾಮುಖಿಗಳೂ ಕೂಡ ಡ್ರಾದಲ್ಲಿ ಅಂತ್ಯಗೊಂಡಿದ್ದವು.
ಮಹಿಳೆಯರ ವಿಭಾಗದಲ್ಲಿ ವೈಶಾಲಿಗೆ ಅಗ್ರಸ್ಥಾನ: ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಪ್ರಗ್ನಾನಂದಾ ಅವರ ಸಹೋದರಿ ಆರ್.ವೈಶಾಲಿ 5.5 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಅವರು ಅನ್ನಾ ಮುಜಿಚುಕ್ ವಿರುದ್ಧ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.