ನವದೆಹಲಿ:ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಹುದ್ದೆ ನೇಮಕಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅರ್ಜಿ ಕರೆದಿದ್ದು, ಅದರ ಗಡುವು ಸೋಮವಾರಕ್ಕೆ (ಮೇ 27) ಮುಗಿದಿದೆ. ಈಗಾಗಲೇ 3 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಬಿಸಿಸಿಐ ಸ್ವೀಕರಿಸಿದೆ ಎಂದು ವರದಿಯಾಗಿದೆ. ವಿಶೇಷ ಎಂದರೆ ಟೀಂ ಇಂಡಿಯಾ ಕೋಚ್ ಹುದ್ದೆಗೆ ನೇಮಕ ಬಯಸಿ ನರೇಂದ್ರ ಮೋದಿ, ಅಮಿತ್ ಶಾ, ಸಚಿನ್ ತೆಂಡೂಲ್ಕರ್ ಅವರು ಅರ್ಜಿ ಸಲ್ಲಿಸಿದ್ದಾರೆ.
ಅಚ್ಚರಿಯಾದರೂ ಇದು ನಿಜ. ಬಿಸಿಸಿಐಗೆ ಬಂದಿರುವ ಅರ್ಜಿಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವರ ಹೆಸರಿದೆ. ಆದರೆ, ಇವು ನಕಲಿಯಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಆನ್ಲೈನ್ ಮೂಲಕ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಇದನ್ನೇ ಬಳಸಿಕೊಂಡ ಕೆಲವರು ಹಲವು ರಾಜಕಾರಣಿಗಳು, ಸೆಲೆಬ್ರಿಟಿಗಳು, ಉದ್ಯಮಿಗಳು, ಮಾಜಿ ಕ್ರಿಕೆಟಿಗರ ಹೆಸರಿನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅದರಲ್ಲೂ ಪ್ರಧಾನಿ, ಗೃಹ ಸಚಿವರ ಹೆಸರಿನಲ್ಲಿ ಅರ್ಜಿ ಹಾಕಿದ್ದು, ಹಾಸ್ಯದ ಸಂಗತಿಯಾಗಿದೆ. ಇದರೊಂದಿಗೆ ಕೋಚ್ ಹುದ್ದೆಯ ರೇಸಲ್ಲೇ ಇಲ್ಲದ ಮಾಜಿ ಕ್ರಿಕೆಟಿಗರಾದ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಹರ್ಭಜನ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಅವರೂ ಅರ್ಜಿದಾರರಾಗಿದ್ದಾರೆ.