ಚಂಡೀಗಢ: ''ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಭೇಟಿಯಾಗಿದ್ದು ಸಂತಸ ತಂದಿದೆ'' ಎಂದು ಒಲಿಂಪಿಕ್ಸ್ ಪದಕ ವಿಜೇತೆ, ಸ್ಟಾರ್ ಶೂಟರ್ ಮನು ಭಾಕರ್ ತಿಳಿಸಿದರು.
''ಕ್ರೀಡಾಪ್ರೇಮಿಯೊಬ್ಬರು ಕ್ರೀಡೆಯ ಬಗ್ಗೆ ಮಾತನಾಡಿದಾಗ ಸಂತೋಷವಾಗುತ್ತದೆ. ಅದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕ್ರೀಡಾ ನೀತಿ ಹೇಗೆಲ್ಲ ಕೆಲಸ ಮಾಡುತ್ತದೆ ಎಂಬುದನ್ನು ಸಿಎಂ ವಿವರಿಸಿದರು. ಇದು ಕ್ರೀಡೆಯಲ್ಲಿನ ಆಸಕ್ತಿಯನ್ನು ತೋರಿಸುತ್ತದೆ'' ಎಂದರು.
ಬಳಿಕ ಮಾತನಾಡಿದ ಸಿಎಂ ಭಗವಂತ್ ಮಾನ್, ''ಮನು ಭಾಕರ್ ಶೂಟಿಂಗ್ ಸ್ಪರ್ಧೆಗಳಲ್ಲಿ ಎರಡು ಪದಕ ಬಾಚಿಕೊಳ್ಳುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ'' ಎಂದರು. ಇದೇ ವೇಳೆ ಅವರನ್ನು ಸನ್ಮಾನಿಸಿದರು.
ಈ ಭೇಟಿ ಬೆನ್ನಲ್ಲೇ ಹರಿಯಾಣದ ಮುಖ್ಯಮಂತ್ರಿ ನೈಬ್ ಸಿಂಗ್ ಸೈನಿ ಕೂಡ ಮನು ಭಾಕರ್ ಮತ್ತು ಸರ್ಬ್ಜೋತ್ ಸಿಂಗ್ ಅವರನ್ನು ಭೇಟಿಯಾದರು. ಉಭಯ ಮುಖ್ಯಮಂತ್ರಿಗಳು ತಮ್ಮ ಭೇಟಿಗಾಗಿ ಅಮೂಲ್ಯ ಸಮಯ ಮೀಸಲಿಟ್ಟಿದ್ದಕ್ಕಾಗಿ ಮನು ಭಾಕರ್ ಕೃತಜ್ಞತೆ ಸಲ್ಲಿಸಿದರು.
ಇದುವರೆಗೆ ಪಡೆದ ಪದಕಗಳ ಸಂಖ್ಯೆಯಲ್ಲಿ ಹರಿಯಾಣ ಅಗ್ರಸ್ಥಾನದಲ್ಲಿದ್ದು, ಮನು ಭಾಕರ್ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಮನು ಭಾಕರ್ ಬುಧವಾರ ಸ್ವದೇಶಕ್ಕೆ ಮರಳಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಗಿತ್ತು. ಈ ಸಂದರ್ಭದಲ್ಲಿ ಕೋಚ್ ಜಸ್ಪಾಲ್ ರಾಣಾ ಕೂಡ ಉಪಸ್ಥಿತರಿದ್ದರು.
ಇದನ್ನೂ ಓದಿ:8 ಚಿನ್ನ, 1 ಬೆಳ್ಳಿ, 4 ಕಂಚು!: ಒಲಿಂಪಿಕ್ಸ್‌ನಲ್ಲಿ 13 ಪದಕಗಳನ್ನು ಗೆದ್ದ ಭಾರತೀಯ ಹಾಕಿ ತಂಡದ ಪಯಣ ಹೀಗಿದೆ - Indian Hockey Medals In Olympics