ಬೆಂಗಳೂರು: ಮಾರ್ಚ್ನಲ್ಲಿ ರಾಜಕೀಯ ಸ್ಥಿತ್ಯಂತರ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಶಾಸ್ತ್ರ ಹೇಳೋಕೆ ಬರಲ್ಲ. ಜ್ಯೋತಿಷ್ಯ ಆಗಿದ್ದರೆ ನಾನು ಹೇಳುತ್ತಿದ್ದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮತ್ತೆ ದಲಿತ ಸಚಿವರು ಸಭೆ ಸೇರುವ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ. ನಾವೆಲ್ಲ ಸಚಿವರು ಸೇರಿ ಚರ್ಚೆ ಮಾಡಿ, ಮುಂದೆ ಏನು ಅಂತ ನಿರ್ಧಾರ ಮಾಡ್ತೇವೆ ಎಂದರು.
ದಲಿತ ಸಮುದಾಯಕ್ಕೆ ಸಿಎಂ ವಿಚಾರದ ಬಗ್ಗೆ ಸಚಿವ ಆರ್.ಬಿ.ತಿಮ್ಮಾಪೂರ ನಾನು ಆಕಾಂಕ್ಷಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು 30 ವರ್ಷ ರಾಜಕೀಯ ಮಾಡಿದ್ದಾರೆ. ಅವರಿಗೂ ಸಾಮರ್ಥ್ಯ ಇದೆ. ಅವರು ಕೇಳೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ದಲಿತರ ಸಭೆ ಬಗ್ಗೆ ಸುರ್ಜೇವಾಲ ಬೇಸರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಪ್ರಧಾನ ಕಾರ್ಯದರ್ಶಿಗಳು ಹೇಳಿ ಹೋಗಿದ್ದಾರೆ. ನಾವು ಸ್ವಲ್ಪ ಮಾತು ಕಡಿಮೆ ಮಾಡ್ತೇವೆ. ನಾವು ಸಮಸ್ಯೆ ಬಗೆಹರಿಸುವುದಕ್ಕೆ ಮಾಡುತ್ತಿರುವುದು. ನಾವಿದ್ದರೆ ತಾನೇ ಪಕ್ಷ. ಜನಸಮುದಾಯ ಇದ್ದರೆ ತಾನೇ ಪಕ್ಷ ಇರೋದು. ಕಾಂಗ್ರೆಸ್ ಪಕ್ಷ ಒಂದು ಅಂದೋಲನ. ಯಾರು ಹೇಗೆ ವ್ಯಾಖ್ಯಾನ ಮಾಡ್ತಾರೆ ಮಾಡಲಿ ಎಂದರು
ಸಂಪುಟ ಸಭೆಯಲ್ಲೇ ಸೀಲ್ಡ್ ಕವರ್ ಓಪನ್ ಮಾಡಬೇಕು: ಕ್ಯಾಬಿನೆಟ್ನಲ್ಲಿ ಜಾತಿ ಗಣತಿ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸಂಪುಟ ಸಭೆಯಲ್ಲೇ ಸೀಲ್ಡ್ ಕವರ್ ಓಪನ್ ಮಾಡಬೇಕು. ಅದಕ್ಕೂ ಮುನ್ನ ಅದನ್ನು ಓಪನ್ ಮಾಡಬಾರದು. ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ. ಅದಕ್ಕೆ ಕ್ಯಾಬಿನೆಟ್ನಲ್ಲಿ ಜಾತಿ ಗಣತಿ ವರದಿ ಕವರ್ ಓಪನ್ ಮಾಡಿ ಎಂದಿದ್ದೇವೆ. ಇದರ ಬಗ್ಗೆ ಚರ್ಚೆ ಅಗುತ್ತಾ, ಆಗಲ್ವಾ ಈಗ ಹೇಳುವುದಕ್ಕೆ ಆಗಲ್ಲ. ವರದಿ ಸೀಲ್ ಓಪನ್ ಮಾಡಿದ ಮೇಲೆ ಗೊತ್ತಾಗುತ್ತದೆ. 160 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ. ಅದು ಸರ್ಕಾರದ ತೆರಿಗೆಯ ಹಣ. ಖರ್ಚು ಮಾಡಿ ಸರ್ಕಾರ ವರದಿ ತರಿಸಿಕೊಂಡಿದೆ. ಕ್ರಮ ತೆಗೆದುಕೊಳ್ಳೋದು ಬಿಡುವುದು ನಂತರ. ಮಾಹಿತಿಯಾದ್ರೂ ಗೊತ್ತಾಗಬೇಕಲ್ಲ. ಅದರ ಮೇಲೆ ತೀರ್ಮಾನ ಮಾಡಬೇಕು ಎಂದರು.
ಸೆನ್ಸಸ್ ಇಟ್ಕೊಂಡು ತೀರ್ಮಾನ ಆಗಬೇಕು. ಮಾಹಿತಿಯೇ ಗೊತ್ತಾಗಲ್ಲ ಅಂದ್ರೆ ಹೇಗೆ?. ನಾವು ಮಾಹಿತಿ ಹೊರಗೆ ತರುತ್ತೇವೆ ಎಂದು ಹೇಳಿದರು.
ದೆಹಲಿಯಲ್ಲಿ ಎಐಸಿಸಿ ಕಚೇರಿ ಉದ್ಘಾಟನೆ ಇದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಿದ್ದರು. ಹಾಗಾಗಿ ಅವರು ಹೋಗಿದ್ದಾರೆ. ನಾನು ಹೋಗಬೇಕೆಂದಿದ್ದೆ. ಎಲ್ಲರೂ ಬ್ಯುಸಿಯಾಗ್ತಾರೆ ಅಂತ ಹೋಗಿಲ್ಲ. ಮುಂದೆ ನಾವು ಹೋಗುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ನ ನೂತನ ಪ್ರಧಾನ ಕಚೇರಿ 'ಇಂದಿರಾ ಭವನ' ಉದ್ಘಾಟಿಸಿದ ಸೋನಿಯಾ ಗಾಂಧಿ; ಸಿಎಂ ಸಿದ್ದರಾಮಯ್ಯ ಭಾಗಿ
ಇದನ್ನೂ ಓದಿ: ಎಲ್ಲ ಪಕ್ಷಗಳ ಶಾಸಕರಿಗೆ ತಲಾ 10 ಕೋಟಿ ರೂಪಾಯಿ ಅನುದಾನ: ಸಿಎಂ ಸಿದ್ದರಾಮಯ್ಯ