ಬೆಳಗಾವಿ: ಕಾರು ಅಪಘಾತದಲ್ಲಿ ನಮ್ಮ ಸಮುದಾಯದ ಜನಪ್ರಿಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗಾಯಗೊಂಡಿರುವುದು ನಮಗೆಲ್ಲ ಬಹಳ ಆಘಾತ ತಂದಿದೆ ಎಂದು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಸ್ವಾಮೀಜಿ ಮಾಧ್ಯಮಗಳ ಜೊತೆಗೆ ಮಾತನಾಡಿದರು. ನಾನು ಹರ ಜಾತ್ರೆಯಲ್ಲಿ ಇರುವುದರಿಂದ ತಡವಾಗಿ ಮಾಹಿತಿ ಬಂತು. ಇವತ್ತು ಬೆಳಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯ ವಿಚಾರಿಸಲು ಬಂದಿದ್ದೇನೆ ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಹಳ ಆರೋಗ್ಯವಾಗಿದ್ದಾರೆ. ಅವರ ಜೊತೆಗೆ ಕೆಲ ನಿಮಿಷ ಮಾತನಾಡಿರುವೆ. ಅವರ ಧೈರ್ಯ, ಸ್ಥೈರ್ಯವನ್ನು ಮೆಚ್ಚಬೇಕು. ಅವರ ಮುಖದಲ್ಲಿ ಯಾವುದೇ ರೀತಿಯ ಅಪಘಾತದ ಭಾವನೆಗಳು ಇಲ್ಲ. ಅವರಲ್ಲಿ ಅದಮ್ಯ, ಧೀಮಂತ ಶಕ್ತಿ ಇದೆ. ಬೇಗ ಗುಣಮುಖ ಆಗಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ, ಜನಸೇವೆಯಲ್ಲಿ ಮತ್ತೆ ಕ್ರೀಯಾಶೀಲವಾಗಲಿ ಎಂದು ಆಶೀರ್ವಾದ ಮಾಡಿದ್ದೇನೆ ಎಂದು ವಚನಾನಂದ ಸ್ವಾಮೀಜಿ ಹೇಳಿದರು.
ಅಪಘಾತದಿಂದ ನಮಗೆ ಬಹಳ ಖೇದ ಆಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬೇಕಿರುವುದು ಚಿಕಿತ್ಸೆಯಲ್ಲ, ವಿಶ್ರಾಂತಿ. ಹರ ಮತ್ತು ಚೆನ್ನಮ್ಮನ ಆಶೀರ್ವಾದದಿಂದ ಅವರಿಗೆ ಗಂಭೀರ ಗಾಯವಾಗಿಲ್ಲ. ಆದರೆ, ಒಂದು ತಿಂಗಳು ಸರಿಯಾದ ಬೆಡ್ ರೆಸ್ಟ್ ಬೇಕಿದೆ. ವೈದ್ಯರು ಹೇಳಿದ ಹಾಗೆ ಹೆಬ್ಬಾಳ್ಕರ್ ಅವರು ವಿಶ್ರಾಂತಿ ಪಡೆದುಕೊಳ್ಳಬೇಕು ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು.
ಸೋಮವಾರ ಸಚಿವರ ಕಾರಿಗೆ ಅಪಘಾತ: ಚನ್ನಮ್ಮನ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಸೋಮವಾರ ಬೆಳಗ್ಗೆ 5 ಗಂಟೆಗೆ ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಿಸುತ್ತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರಿದ್ದ ಕಾರು ಅಪಘಾತಕ್ಕೀಡಾದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಸರ್ವೀಸ್ ರಸ್ತೆಯ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಲಕ್ಷ್ಮೀ ಹೆಬ್ಬಾಳ್ಕರ್, ಸಹೋದರ ಮತ್ತು ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾರು ಚಾಲಕ ಹಾಗೂ ಗನ್ ಮ್ಯಾನ್ ಗಾಯಗೊಂಡಿದ್ದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬೆನ್ನು ಮೂಳೆಗೆ ತೀವ್ರ ಪೆಟ್ಟಾಗಿದೆ. ಸಚಿವರಿಗೆ ನೋವು ಕಡಿಮೆ ಆಗಿರುವುದನ್ನು ದೃಢಪಡಿಸಿಕೊಂಡು, ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದರು.
ಬೆಂಗಳೂರಿನಿಂದ ಬೆಳಗಾವಿಗೆ ಸಚಿವರ ಸರ್ಕಾರಿ ಕಾರಿನಲ್ಲಿ ಆಗಮಿಸುವ ವೇಳೆ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಕಿತ್ತೂರು ಬಳಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ: ಆಸ್ಪತ್ರೆಗೆ ದಾಖಲು
ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ರನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಅವಶ್ಯಕತೆಯಿಲ್ಲ: ಡಾ. ರವಿ ಪಾಟೀಲ