ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ಬೆಟ್ಟದಲ್ಲಿ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು. ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಇಂದು ನಡೆದ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಜಿಲ್ಲೆಯಿಂದ ಅಷ್ಟೇ ಅಲ್ಲದೆ ವಿವಿಧ ರಾಜ್ಯಗಳಿಂದ ಭಕ್ತಸಾಗರವೇ ಜಾತ್ರೆಗೆ ಹರಿದುಬಂದಿತ್ತು. ಎಲ್ಲರೂ ಸೇರಿ ರಥ ಎಳೆದು ಪುನೀತರಾದರು. ಗರುಡ ಪಕ್ಷಿಯು ರಥದ ಸುತ್ತ ಪ್ರದಕ್ಷಿಣೆ ಹಾಕಿದ ಬಳಿಕ ರಥೋತ್ಸವಕ್ಕೆ ಚಾಲನೆ ಸಿಕ್ಕಿತು.
ದೇಗುದಲ್ಲಿ ಪ್ರತಿ ವರ್ಷ ಎರಡು ಬಾರಿ ರಥೋತ್ಸವ ನಡೆಯುತ್ತದೆ. ಸಂಕ್ರಾಂತಿಯ ಮಾರನೇ ದಿನ ಈ ಚಿಕ್ಕಜಾತ್ರೆ ನಡೆದರೆ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ದೊಡ್ಡಜಾತ್ರೆ ನಡೆಯುತ್ತದೆ. ಈ ವೇಳೆ, ಇಲ್ಲಿ ದಾಸಂದಿರು ಅಕ್ಕಿ, ಕಜ್ಜಾಯ, ಬೆಲ್ಲ, ತೆಂಗಿನಕಾಯಿ, ಕಡ್ಲೆಯನ್ನು ಹಾಕಿ ಬ್ಯಾಟೆಮನೆ ಸೇವೆ ಹಾಕುವ ಸಂಪ್ರದಾಯವಿದೆ. ದೇಗುಲದ ಸುತ್ತ ಜಾಗಟೆ, ಶಂಖನಾದ ಹೊಮ್ಮಿಸಿ ಬಹುಪರಾಕ್, ಬಹುಪರಾಕ್ ಎಂದು ಕೂಗಿ ವಿಶಿಷ್ಟವಾಗಿ ಆಚರಿಸುವ ಈ ಸಂಪ್ರದಾಯಕ್ಕೂ ಚಿಕ್ಕಜಾತ್ರೆ ಸಾಕ್ಷಿಯಾಯಿತು.
ದೇವರಿಗೆ ಮೈಸೂರಿನ ಮಹಾರಾಜರು ನೀಡಿರುವ ಕಿರೀಟ ಸೇರಿದಂತೆ ವಿವಿಧ ಚಿನ್ನಾಭರಣಗಳಿಂದ ದೇವರನ್ನು ಅಲಂಕಾರ ಮಾಡಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ದ್ವಿಚಕ್ರ ವಾಹನಗಳನ್ನು ಬೆಟ್ಟದ ತಪ್ಪಲಿನಲ್ಲೇ ನಿರ್ಬಂಧಿಸಲಾಗಿತ್ತು. ಬೆಟ್ಟದ ತಪ್ಪಲಿನಿಂದ ಸಾರಿಗೆ ಸಂಸ್ಥೆ ಬಸ್ಗಳ ಸೇವೆ ಕಲ್ಪಿಸಲಾಗಿತ್ತು.
ಸೋಲಿಗರ ಆರಾಧ್ಯ ದೈವ: ಬಿಳಿಗಿರಿರಂಗನಾಥಸ್ವಾಮಿ ಸೋಲಿಗರ ಆರಾಧ್ಯ ದೈವ ಕೂಡ ಆಗಿದ್ದು, ಸೋಲಿಗರಾದ ಕುಸುಮಾಲೆಯನ್ನು ರಂಗನಾಥಸ್ವಾಮಿ ವರಿಸಿದ ಹಿನ್ನೆಲೆ ಸೋಲಿಗರು ರಂಗನಾಥನನ್ನು ರಂಗಭಾವ ಎಂದೇ ಸಂಬೋಧಿಸಿ ಪ್ರಾರ್ಥಿಸುತ್ತಾರೆ.
ಬಿಳಿಗಿರಿರಂಗನ ಬೆಟ್ಟ ಸೇರಿದಂತೆ ವಿವಿಧ ಹಾಡಿಗಳಿಂದ ನೂರಾರು ಮಂದಿ ಸೋಲಿಗರು ಕುಟುಂಬ ಸಮೇತರಾಗಿ ಬಂದು ರಥೋತ್ಸವದಲ್ಲಿ ಭಾಗಿಯಾದರು. ಇನ್ನು, ಸೋಲಿಗರೇ ಇಲ್ಲಿನ ರಥವನ್ನು ಕಟ್ಟುವುದು ವಿಶೇಷವಾಗಿದೆ.