Nitish Kumar Reddy Century: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಅಬ್ಬರ ಮುಂದುವರೆದಿದೆ.
ಆಸ್ಟ್ರೇಲಿಯಾ ಬೌಲರ್ಗಳನ್ನು ಚೆಂಡಾಡುತ್ತಿರುವ ರೆಡ್ಡಿ ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿ ಘರ್ಜಿಸಿ ದಾಖಲೆ ಬರೆದಿದ್ದಾರೆ. ತಮ್ಮ ಈ ಅಮೋಘ ಇನ್ನಿಂಗ್ಸ್ನಲ್ಲಿ ರೆಡ್ಡಿ 9 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಶತಕ ಸಿಡಿಸಿ ಮಿಂಚಿದರು.
4 ವರ್ಷಗಳ ಬಳಿಕ ಶತಕ: ಆಸ್ಟ್ರೇಲಿಯಾದ ಮೆಲ್ಬೋರ್ನ್ ಮೈದಾನದಲ್ಲಿ 4 ವರ್ಷಗಳ ಬಳಿಕ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಆಗಿ ನಿತೀಶ್ ದಾಖಲೆ ಬರೆದಿದ್ದಾರೆ. ಈ ಹಿಂದೆ 2020ರಲ್ಲಿ ಅಜಿಂಕ್ಯಾ ರಹಾನೆ ಮೆಲ್ಬೋರ್ನ್ನಲ್ಲಿ ಶತಕ ಸಿಡಿಸಿದ್ದರು. ಇದಲ್ಲದೇ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದು ಹೈಸ್ಕೋರ್ ಗಳಿಸಿದ ಭಾರತದ ಬ್ಯಾಟರ್ ಆಗಿ ಅನಿಲ್ ಕುಂಬ್ಳೆ ದಾಖಲೆ ಮುರಿದಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಅನಿಲ್ ಕುಂಬ್ಳೆ ಅಡಿಲೇಡ್ ಮೈದಾನದಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 87 ರನ್ ಕಲೆಹಾಕಿದ್ದರು.
ವಾಷಿಂಗ್ಟನ್ ಸುಂದರ್ ಅರ್ಧಶತಕ: ನಿತೀಶ್ ಜೊತೆಗೂಡಿ ವಾಷಿಂಗ್ಟನ್ ಸುಂದರ್ ಭರ್ಜರಿ ಪ್ರದರ್ಶನ ತೋರಿದರು. ಅವರು ತಮ್ಮ ಇನ್ನಿಂಗ್ಸ್ನಲ್ಲಿ 162 ಎಸೆತಗಳನ್ನು ಆಡಿ 1 ಬೌಂಡರಿ ಸಹಾಯದಿಂದ 50 ರನ್ ಚಚ್ಚಿದರು. ಆದರೆ, ಲಿಯಾನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು.
ಮೂರನೇ ದಿನವಾದ ಇಂದು 221 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ, ಬ್ಯಾಟಿಂಗ್ಗೆ ಬಂದ ನಿತೀಶ್ ರೆಡ್ಡಿ ಮತ್ತು ವಾಷಿಂಗ್ಟನ್ ಜೊತೆಗೂಡಿ ಆಸ್ಟ್ರೇಲಿಯನ್ನರ ವಿರುದ್ಧ ಕೆಚ್ಚೆದೆಯ ಪ್ರದರ್ಶನ ತೋರಿದರು. ತಂಡವನ್ನು ಫಾಲೋ ಆನ್ ಭೀತಿಯಿಂದ ಪಾರುಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪುಷ್ಪ ಶೈಲಿಯಲ್ಲಿ ಸಂಭ್ರಮ: ಬಲಿಷ್ಠ ಆಸ್ಟ್ರೇಲಿಯನ್ ಬೌಲಿಂಗ್ ಪಡೆ ಎದುರು ಲೀಲಾಜಾಲವಾಗಿ ಬ್ಯಾಟ್ ಬೀಸಿರುವ ನಿತೀಶ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಆದರೆ, ಇದಕ್ಕೂ ಮುನ್ನ ಪಂದ್ಯದ 83ನೇ ಓವರ್‌ನಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಚೊಚ್ಚಲ ಅರ್ಧಶತಕ ಪೂರೈಸಿದರು. ಮಿಚೆಲ್ ಸ್ಟಾರ್ಕ್ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರ್ಣಗೊಳಿಸಿದರು. 50 ರನ್ ಪೂರ್ಣಗೊಳಿಸುತ್ತಿದ್ದಂತೆ ನಿತೀಶ್ ಪುಷ್ಪ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಬಿಸಿಸಿಐ ಕೂಡ ನಿತೀಶ್ ಅವರ ಪೋಸ್ಟ್ ಹಂಚಿಕೊಂಡಿದ್ದು, ನಿತೀಶ್ ಫ್ಲವರ್ ಅಲ್ಲ ಫೈರ್ ಎಂದು ಬರೆದು ಕೊಂಡಿದೆ.
ಇದನ್ನೂ ಓದಿ:ನಿತೀಶ್ ರೆಡ್ಡಿ ಫ್ಲವರ್ ಅಲ್ಲ ಫೈರ್.!: ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್ನಲ್ಲಿ ಸಂಭ್ರಮ; ವಿಡಿಯೋ