ಒಸ್ಟ್ರಾವ: ಒಲಿಂಪಿಕ್ ಚಿನ್ನದ ಪದಕ ವಿಜೇತ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ ತರಬೇತಿಯ ವೇಳೆ ಸ್ನಾಯು ನೋವಿಗೆ ತುತ್ತಾಗಿದ್ದಾರೆ. ಇದರಿಂದಾಗಿ ಮುಂಬರುವ ಒಸ್ಟ್ರಾವ ಗೋಲ್ಡನ್ ಸ್ಪೈಕ್ 2024 ಅಥ್ಲೆಟಿಕ್ಸ್ ಮೀಟ್, ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಗೋಲ್ಡ್ ಲೇಬಲ್ ಈವೆಂಟ್‌ನಿಂದ ಹೊರಗುಳಿಯಲಿದ್ದಾರೆ. ಆದರೆ, ಮೇ 28ರಂದು ಈವೆಂಟ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ನೀರಜ್ ಚೋಪ್ರಾ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆ ತರಬೇತಿಯ ವೇಳೆ ನೀರಜ್ ಸ್ನಾಯು ನೋವಿಗೆ ತುತ್ತಾಗಿದ್ದಾರೆ. ಇದರಿಂದಾಗಿ ಒಸ್ಟ್ರಾವಾದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಆದರೆ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ. ನೀರಜ್ ಅನುಪಸ್ಥಿತಿಯಲ್ಲಿ ಜರ್ಮನಿಯ ವೆಬರ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಯುರೋಪಿಯನ್ ಚಾಂಪಿಯನ್ ಜರ್ಮನಿಯ ಡೆಸ್ಸೌದಲ್ಲಿ ಶುಕ್ರವಾರ 88.37 ಮೀಟರ್ ದೂರ ಎಸೆಯುವ ಮೂಲಕ ವರ್ಷದ ಮೂರನೇ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು.