ಹಾಸನ: ಮುಂಗಾರಿನಲ್ಲಿ ನಾಟಿ ಮಾಡಿದ್ದ ಭತ್ತ ಇದೀಗ ಕಟಾವಿಗೆ ಬಂದಿದ್ದು ಆನೆ ಹಾವಳಿಗೆ ಹೆದರಿ ಬೆಳೆಯನ್ನು ಉಳಿಸಿಕೊಳ್ಳಲು ಏಕಕಾಲಕ್ಕೆ ರೈತರು ಕೊಯ್ಲು ಮಾಡಲು ಮುಂದಾಗಿರುವ ಪರಿಣಾಮ ಕಟಾವು ಯಂತ್ರಕ್ಕೆ ಭಾರಿ ಬೇಡಿಕೆ ಬಂದಿದೆ.
ಬೇಲೂರು ತಾಲೂಕಿನ ಬಿಕ್ಕೋಡು ಹಾಗೂ ಅರೇಹಳ್ಳಿ ಹಾಗೂ ಸಕಲೇಶಪುರ ತಾಲ್ಲೂಕಿನ ಭಾಗದಲ್ಲಿ ಸರಿಸುಮಾರು 7-8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಡಿಸೆಂಬರ್ ಹಾಗೂ ಜನವರಿ ತಿಂಗಳು ಕಟಾವು ಮಾಡಲು ಸೂಕ್ತ ಸಮಯವಾದ್ದರಿಂದ ರೈತಾಪಿ ವರ್ಗ ಕೊಯ್ಲು ಮಾಡಲು ಪೂರ್ವ ತಯಾರಿ ಮಾಡಿಕೊಂಡಿತ್ತು. ಆದ್ರೆ ಕಾಡಾನೆಗಳ ಹಾವಳಿಯಿಂದ ಈ ಭಾಗದ ರೈತರು ನಲುಗಿಹೋಗಿದ್ದು, ನಿತ್ಯ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸಪಡಬೇಕಾದ ಸ್ಥಿತಿ ಬಂದೊದಗಿದೆ.
ಭತ್ತ ಕಟಾವು ಮಾಡುವ ವೇಳೆ ಎಂಟ್ರಿಕೊಟ್ಟ ಕಾಡಾನೆ : ಅರೇಹಳ್ಳಿ ಹೋಬಳಿಯ ಹೆಗ್ಗಡಿಹಳ್ಳಿಯ ರೈತರು ಹುಲುಸಾಗಿ ಬೆಳೆದಿದ್ದ ಭತ್ತವನ್ನು ಕಟಾವು ಮಾಡುತ್ತಿದ್ದ ವೇಳೆ ಭತ್ತ ತಿನ್ನಲು ಮಠ ಮಠ ಮಧ್ಯಾಹ್ನನವೇ ಘೀಳಿಟ್ಟು ಹಠಾತ್ತನೆ ಗದ್ದೆಗೆ ನುಗ್ಗಿದ ಒಂಟಿ ಕಾಡಾನೆಯಿಂದ ಸ್ಥಳೀಯ ರೈತರು ಭಯಭೀತರಾಗಿ ತಮ್ಮ ಜಮೀನಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನೂ ಕೆಲವರು ಭತ್ತದ ಕೊಯ್ಲು ಕಾರ್ಯವನ್ನು ಮೊಟಕುಗೊಳಿಸಿ ಪರಾರಿಯಾಗುವ ವೇಳೆ ಕೈ, ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರೈತರು, ಕಾಪಾಡಿಕೊಂಡು ಬಂದ ಭತ್ತದ ಬೆಳೆ ಎಲ್ಲಿ ಮತ್ತೆ ಕಾಡಾನೆಗಳ ಪಾಲಾಗುತ್ತದೆ ಎಂಬ ಭಯದಿಂದ ಭತ್ತದ ಕೊಯ್ಲು ಕಾರ್ಯಕ್ಕೆ ಚುರುಕು ನೀಡಿ ಯಾಂತ್ರಿಕೃತ ಕಟಾವಿಗೆ ಮುಂದಾಗಿದ್ದಾರೆ.
![ಭತ್ತ ಕಟಾವು ಮಾಡುತ್ತಿರುವ ರೈತ](https://etvbharatimages.akamaized.net/etvbharat/prod-images/09-01-2025/23291443_hsn.jpg)
![PADDY HARVESTING MACHINE](https://etvbharatimages.akamaized.net/etvbharat/prod-images/09-01-2025/23291443_paddy.jpg)
ಒಟ್ಟಿನಲ್ಲಿ ಕೊಯ್ಲಿಗೆ ಬಂದಿರುವ ಭತ್ತದ ಗದ್ದೆಯನ್ನು ಕಾಡಾನೆಗಳು ತುಳಿದು ನಾಶಪಡಿಸಿದೆ. ಉಳಿದ ಪೈರು ಮಕಾಡೆ ಮಲಗಿದೆ. ಹಾಗಾಗಿ ಯಂತ್ರ ಕಟಾವು ಮಾಡಲು ಅಸಾಧ್ಯವಾಗುವುದರಿಂದ ಹೆಚ್ಚಿನ ಕೂಲಿ ನೀಡಿ ಕಾರ್ಮಿಕರ ಬಳಿ ಕಟಾವು ಮಾಡಿಸಬೇಕು. ಈ ವೇಳೆ ಕಾರ್ಮಿಕರ ಜೀವವನ್ನು ಉಳಿಸಲು ಕಟಾವು ಮಾಡುವ ವೇಳೆ ಅರಣ್ಯ ಇಲಾಖೆ ಸೂಕ್ತ ಭದ್ರತೆ ಒದಗಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
![ಭತ್ತದ ಗದ್ದೆಗೆ ನುಗ್ಗಿರುವ ಆನೆ](https://etvbharatimages.akamaized.net/etvbharat/prod-images/09-01-2025/23291443_elephant.jpg)
ಕೊಯ್ಲಿಗೆ ಬಂದಿರುವ ಭತ್ತದ ಗದ್ದೆಯನ್ನು ಕಾಡಾನೆಗಳು ತುಳಿದು ನಾಶಪಡಿಸಿವೆ. ಉಳಿದ ಪೈರು ಮಕಾಡೆ ಮಲಗಿದೆ. ಹಾಗಾಗಿ ಯಂತ್ರ ಕಟಾವು ಮಾಡಲು ಅಸಾಧ್ಯವಾಗುವುದರಿಂದ ಹೆಚ್ಚಿನ ಕೂಲಿ ನೀಡಿ ಕಾರ್ಮಿಕರ ಬಳಿ ಕಟಾವು ಮಾಡಿಸಬೇಕು. ಈ ವೇಳೆ ಕಾರ್ಮಿಕರ ಜೀವವನ್ನು ಉಳಿಸಲು ಕಟಾವು ಮಾಡುವ ವೇಳೆ ಅರಣ್ಯ ಇಲಾಖೆ ಸೂಕ್ತ ಭದ್ರತೆ ಒದಗಿಸಬೇಕು - ಮಹೇಶ್ ರೈತ,
ಬಿಕ್ಕೋಡು ಗ್ರಾಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯಂತ್ರಧಾರೆ ಮೂಲಕ ಭತ್ತ ಕಟಾವು ಯಂತ್ರವನ್ನು ರಿಯಾಯಿತಿ ದರದಲ್ಲಿ ರೈತರಿಗೆ ಬಾಡಿಗೆ ರೂಪದಲ್ಲಿ ನೀಡುತ್ತಿದೆ. ಕಳೆದ ಸಾಲಿಗೆ ಹೋಲಿಸಿಕೊಂಡರೆ ಈ ಬಾರಿ ಬಾಡಿಗೆ ದರ ತುಸು ಹೆಚ್ಚಾಗಿದೆ. ಆದ್ರೆ ಭತ್ತವನ್ನು ಮನೆಗೆ ಒಯ್ಯಲು ರೈತರು ಬಿಕ್ಕೋಡು ಭಾಗಗಳಲ್ಲಿ ಹರಿಕೇನ್ ಹಾರ್ವೆಸ್ಟರ್ ಎಂಬ ದೊಡ್ಡ ಯಂತ್ರವನ್ನು ಬಾಡಿಗೆಗೆ ಪಡೆಯಲು ಮಧ್ಯವರ್ತಿಗಳಿಗೆ ದುಂಬಾಲು ಬೀಳುತ್ತಿದ್ದಾರೆ. - ಅಮಿತ್ ಶೆಟ್ಟಿ, ಬಿಜೆಪಿ ಮುಖಂಡ
ಇದನ್ನೂ ಓದಿ:ರಾಜ್ಯದಲ್ಲಿ ಜ.15ರ ವರೆಗೆ ಮೈನಡುಗಿಸುವ ಚಳಿ; ಈ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ!