ಅಲ್ವಾರ್ (ರಾಜಸ್ಥಾನ) : ಹೆಚ್ಚಿನ ಯುವಕರು ಬೈಕ್ ಅನ್ನು ಅತಿಯಾಗಿ ಪ್ರೀತಿಸುತ್ತಾರೆ. ಅದನ್ನು ಏನೇನೋ ರೂಪಕ್ಕೆ ಮಾರ್ಪಾಡು ಮಾಡುತ್ತಾರೆ. ರಾಜಸ್ಥಾನದ ಯುವಕನೊಬ್ಬ ತನ್ನಲ್ಲಿರುವ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಕಟ್ಟಿಗೆಯ ತುಂಡುಗಳಿಂದ ಹೊಸರೂಪ ನೀಡಿದ್ದಾನೆ.
ಇದು ನಿಜಕ್ಕೂ ಅಚ್ಚರಿಯ ಸಂಗತಿ. ಕಬ್ಬಿಣ ಅಥವಾ ಸ್ಟೀಲ್ನಿಂದ ಮಾಡಬಹುದಾದ ಬೈಕ್ ಅನ್ನು ಕಟ್ಟಿಗೆಯಿಂದ ಹೇಗೆ ತಯಾರಿಸಲು ಸಾಧ್ಯ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ, ಈ ಬೈಕ್ ಅನ್ನು ನೀವು ನೋಡಲೇಬೇಕು. ಮುಖ್ಯವಾದ ಭಾಗಗಳನ್ನು ಬಿಟ್ಟರೆ ಬೈಕ್ ಪೂರ್ತಿ ಕಟ್ಟಿಗೆಯಿಂದ ಹೊಳೆಯುತ್ತಿದೆ.
ರಾಜಸ್ಥಾನದ ಆಲ್ವಾರ್ ಜಿಲ್ಲೆಯ ಜಖೇಡಾ ಗ್ರಾಮದ 26 ವರ್ಷದ ಶಾರೂಖ್ ತನ್ನಲ್ಲಿನ ಸ್ಪ್ಲೆಂಡರ್ ಬೈಕ್ ಅನ್ನು ಸಂಪೂರ್ಣವಾಗಿ ಹೊಸರೂಪಕ್ಕೆ ತಂದಿದ್ದಾನೆ. ಶೀಶಮ್ ಮರದ ಕಟ್ಟಿಗೆಯನ್ನು ಬಳಸಿ, ಅದಕ್ಕೆ ಬೇರೆಯದ್ದೇ ರೂಪ ತಂದಿದ್ದಾನೆ.
ಪೆಟ್ರೋಲ್ ಟ್ಯಾಂಕ್‌ನಿಂದ ಹಿಡಿದು ಸೈಲೆನ್ಸರ್‌ನವರೆಗೂ ಪ್ರತಿಯೊಂದು ಭಾಗವನ್ನೂ ಬದಲಿಸಿದ್ದಾನೆ. ಕಟ್ಟಿಗೆಯು ನೀರು, ಮಳೆಗೆ ತೊಯ್ದು ಹಾಳಾಗದಂತೆ ಜಲನಿರೋಧಕ (ವಾಟರ್‌ಪ್ರೂಫ್) ಪಾಲಿಶ್ ಮಾಡಿದ್ದಾನೆ. ಮಾರ್ಪಾಡದ ಬೈಕ್ ಗಟ್ಟಿಮುಟ್ಟಾದ ಮತ್ತು ಮಳೆ ನಿರೋಧಕ ಶಕ್ತಿಯನ್ನು ಹೊಂದಿದೆ.
ಶಾರುಖ್ ತಮ್ಮ ಹಳೆಯ ಸ್ಪ್ಲೆಂಡರ್‌ನಲ್ಲಿ ಉಕ್ಕು ಮತ್ತು ಕಬ್ಬಿಣದ ಭಾಗವನ್ನು ಬಿಡಿಸಿ, ನುಣ್ಣಗೆ ಪಾಲಿಶ್ ಮಾಡಿದ ಶೀಶಮ್ ಮರದ ತುಂಡುಗಳಿಂದ ಜೋಡಿಸಿದ್ದಾನೆ. ಇದು ಅದ್ಭುತವಾದ ಮೇಕ್ ಓವರ್ ನೀಡುತ್ತದೆ. ಬೈಕ್ ಅನ್ನು ಹೊಸರೂಪಕ್ಕೆ ರೂಪಾಂತರ ಮಾಡಲು ಆತ ಎರಡೂವರೆ ತಿಂಗಳು ಶ್ರಮಪಟ್ಟಿದ್ದಾನೆ.
ಶಾರೂಕ್ ಪ್ರತಿಕ್ರಿಯೆ : ಕಟ್ಟಿಗೆಯ ಸ್ಪ್ಲೆಂಡರ್ ಬೈಕ್ ರೂಪಿಸಿದ ಬಗ್ಗೆ ಶಾರೂಕ್ ತನ್ನದೇ ಮಾತುಗಳಲ್ಲಿ ವಿವರಿಸಿದ್ದು ಹೀಗಿದೆ. ಹಳೆ ಬೈಕ್ ಆದ ಕಾರಣ, ಕೆಲ ಭಾಗಗಳು ತುಕ್ಕು ಹಿಡಿದಿದ್ದವು. ಅದನ್ನು ಹೊಸ ರೂಪಕ್ಕೆ ಬದಲಿಸಲು ಯೋಚಿಸಿ, ಕಡಿಮೆ ವೆಚ್ಚದಲ್ಲಿ ಕಟ್ಟಿಗೆಯಿಂದ ಮಾರ್ಪಡಿಸಲು ಬಯಸಿದೆ. ಅದರಂತೆ 25 ಸಾವಿರ ರೂಪಾಯಿ ಖರ್ಚು ಮಾಡಿ ಕಟ್ಟಿಗೆ ಮತ್ತು ಕೆಲ ಭಾಗಗಳನ್ನು ಖರೀದಿಸಿದೆ. ಇದನ್ನು ರೂಪಿಸಲು ಎರಡೂವರೆ ತಿಂಗಳು ಹಿಡಿಯಿತು. ನನ್ನ ಸಹೋದರನೂ ಇದರಲ್ಲಿ ನೆರವಾಗಿದ್ದಾನೆ.
ಕಟ್ಟಿಗೆ ನೀರಿನಿಂದ ಹಾಳಾಗದಂತೆ ಶೀಶಮ್ ಮರದ ತುಂಡುಗಳ ಮೇಲೆ ವಾಟರ್‌ಪ್ರೂಫ್ ಪಾಲಿಶ್ ಬಳಸಿದ್ದೇನೆ. ಅದು ಹೊಳೆಯುವುದರ ಜೊತೆಗೆ, ಬಾಳಿಕೆಯೂ ಬರುತ್ತದೆ. ತುಸು ತೂಕ ಹೆಚ್ಚಾದರೂ, ಮಳೆ ನೀರಿನಿಂದ ರಕ್ಷಣೆ ನೀಡುತ್ತದೆ ಎಂದು ತಿಳಿಸಿದ್ದಾನೆ.
ಕಟ್ಟಿಗೆಯ ಜೀಪ್ ತಯಾರಿಸುವ ಗುರಿ : ಕಟ್ಟಿಗೆಯ ಬೈಕ್ ತಯಾರಿಸಿರುವ ಶಾರೂಖ್ ಕಟ್ಟಿಗೆಯ ಜೀಪ್ ರೂಪಿಸುವ ಗುರಿ ಹೊಂದಿದ್ದಾನೆ. ಹಳೆಯ ಕಮಾಂಡರ್ ಜೀಪ್ ಅನ್ನು ಇದೇ ರೀತಿ ಮಾರ್ಪಡಿಸಲು ಯೋಜಿಸಿದ್ದೇನೆ. ಮರದ ಥಾರ್ ರೀತಿ ರೂಪಿಸುವ ಇರಾದೆ ಇದೆ. ಆದರೆ, ಇದು ವರ್ಷಗಟ್ಟಲೆ ಸಮಯ ಹಿಡಿಯಲಿದೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಒಂದಲ್ಲ, ಎರಡಲ್ಲ ಭಾರತದಲ್ಲಿ 14 ಹೊಚ್ಚ ಹೊಸ ಬೈಕ್ಗಳ ಬಿಡುಗಡೆಗೆ ಡುಕಾಟಿ ರೆಡಿ