ಬೆಂಗಳೂರು:ನಾಯಕ ಕರುಣ್ ನಾಯರ್ ಮತ್ತು ಎಸ್.ಯು.ಕಾರ್ತಿಕ್ ಅವರ ಅರ್ಧಶತಕಗಳ ನೆರವಿನಿಂದ ಮೈಸೂರು ವಾರಿಯರ್ಸ್ ತಂಡ ಭಾನುವಾರ ಇಲ್ಲಿ ನಡೆದ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೂರನೇ ಆವೃತ್ತಿಯ ಅಂತಿಮ ಹಣಾಹಣಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 45 ರನ್‌ಗಳ ಜಯದೊಂದಿಗೆ ಪ್ರಶಸ್ತಿ ಗೆದ್ದುಕೊಂಡಿತು.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಕ್ಷೇತ್ರ ರಕ್ಷಣೆ ಮಾಡುವ ನಿರ್ಧಾರ ಕೈಗೊಂಡರು. ಬ್ಯಾಟಿಂಗ್ಗಿಳಿದ ಮೈಸೂರು ವಾರಿಯರ್ಸ್, 29 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಕಾರ್ತಿಕ್ ಸಿ.ಎ. 3 ರನ್ಗೆ ಔಟಾದರು. ಆದರೆ ಬಳಿಕ ಒಂದಾದ ಎಸ್.ಯು.ಕಾರ್ತಿಕ್ (44 ಎಸೆತಗಳಲ್ಲಿ 71 ರನ್) ಹಾಗೂ ನಾಯಕ ಕರುಣ್ ನಾಯರ್ (45 ಎಸೆತಗಳಲ್ಲಿ 66 ರನ್) ಭರ್ಜರಿ ಆಟವಾಡಿದರು. ಈ ಜೋಡಿ ಎರಡನೇ ವಿಕೆಟ್ಗೆ 81 ರನ್ ಸೇರಿಸಿತು.
ಕಾರ್ತಿಕ್ ಔಟಾದ ಬಳಿಕ ಅಬ್ಬರದ ಬ್ಯಾಟಿಂಗ್ ತೋರಿದ ಕರುಣ್ ನಾಯರ್ (66), ಅರ್ಧಶತಕ ಬಾರಿಸಿ ಮಿಂಚಿದರು. ಕೊನೆಯ ಹಂತದಲ್ಲಿ ಅಬ್ಬರಿಸಿದ ಮನೋಜ್ ಭಾಂಡಗೆ 13 ಎಸೆತಗಳಲ್ಲಿ 44 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 200 ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ, ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಮೊತ್ತ ಕಲೆ ಹಾಕಿತು.
ಬೆಂಗಳೂರು ಬ್ಲಾಸ್ಟರ್ಸ್ ವೈಫಲ್ಯ: 208 ರನ್‌ಗಳ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. 26 ರನ್ ಆಗುವಷ್ಟರಲ್ಲಿ ನಾಯಕ ಮಯಾಂಕ್ (6) ಪ್ರಮುಖ ಸೇರಿ ಮೂವರು ಬ್ಯಾಟರ್ಗಳು ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ಆರಂಭಿಕ ಆಟಗಾರ ಎಲ್.ಆರ್.ಚೇತನ್ ಕೊಂಚ ಹೋರಾಟ ಪ್ರದರ್ಶಿಸಿ, ಅರ್ಧಶತಕ (51) ಬಾರಿಸಿದರೂ ಸಾಕಾಗಲಿಲ್ಲ.