Hardik Pandya: ಮುಂದಿನ ವರ್ಷದ ಐಪಿಎಲ್ಗಾಗಿ ನವೆಂಬರ್ 24 ಮತ್ತು 25ರಂದು ಆಟಗಾರರ ಮೆಗಾ ಹರಾಜು ನಡೆಯಲಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ 366 ಭಾರತೀಯರು ಮತ್ತು 208 ವಿದೇಶಿ ಆಟಗಾರರನ್ನು ಒಳಗೊಂಡಂತೆ ಒಟ್ಟು 574 ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲಾ ಫ್ರಾಂಚೈಸಿಗಳು ಕೆಲವೇ ಆಟಗಾರರನ್ನು ಉಳಿಸಿಕೊಂಡಿದ್ದರೆ, ಮುಂಬೈ ಮಾತ್ರ ಹರಾಜಿಗೂ ಮೊದಲೇ ಐವರು ಆಟಗಾರರಾದ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರನ್ನು ತಂಡದಲ್ಲಿ ಉಳಿಸಿದೆ.
ಏತನ್ಮಧ್ಯೆ, ಪಂದ್ಯಾವಳಿಗೂ ಮೊದಲೇ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಮೊದಲ ಪಂದ್ಯದಿಂದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ನಿಷೇಧಿಸಲಾಗಿದೆ. ಕಳೆದ ವರ್ಷ ಐಪಿಎಲ್ ಆರಂಭಕ್ಕೂ ಮೊದಲು ಗುಜರಾತ್ ತಂಡದಿಂದ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್‌ಗೆ ವಾಪಸ್ ಕರೆಸಿಕೊಳ್ಳಲಾಗಿತ್ತು. ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ಗೆ ನಾಯಕತ್ವ ಹಸ್ತಾಂತರಿಸಲಾಗಿತ್ತು. ಆದರೆ ಹಾರ್ದಿಕ್ ನಾಯಕತ್ವದಲ್ಲಿ, ಮುಂಬೈ ಇಂಡಿಯನ್ಸ್ ಕಳೆದ ಋತುವಿನಲ್ಲಿ ಕಳಪೆ ಪ್ರದರ್ಶನ ತೋರಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಲುಪಿತ್ತು.
ನಿಷೇಧಕ್ಕೇನು ಕಾರಣ?: ಲಕ್ನೋ ವಿರುದ್ಧದ ಮುಂಬೈ ಇಂಡಿಯನ್ಸ್ನ ಕೊನೆಯ ಪಂದ್ಯದಲ್ಲಿ ಮಾಡಿದ ಕೆಲ ತಪ್ಪುಗಳಿಂದಾಗಿ ಹಾರ್ದಿಕ್ ಪಾಂಡ್ಯ ಮತ್ತು ಇಡೀ ತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಿಗದಿತ ಸಮಯ ಓವರ್‌ಗಳನ್ನು ಪೂರ್ಣಗೊಳಿಸಿರಲಿಲ್ಲ. ಇದರಿಂದಾಗಿ 30 ಲಕ್ಷ ರೂ ದಂಡ ಸಹಿತ ನಾಯಕ ಹಾರ್ದಿಕ್ ಪಾಂಡ್ಯಗೆ ಮುಂದಿನ ಒಂದು ಪಂದ್ಯ ನಿಷೇಧಿಸಿ ಆದೇಶಿಸಲಾಗಿತ್ತು.