ರಾವಲ್ಪಿಂಡಿ(ಪಾಕಿಸ್ತಾನ): ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 448 ರನ್ ಗಳಿಸಿದ ಪಾಕ್, ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇದಕ್ಕುತ್ತರವಾಗಿ ಬಾಂಗ್ಲಾದೇಶ 68.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು. ಆದರೆ, ರಿಜ್ವಾನ್ ಅಭಿಮಾನಿಗಳು ಡಿಕ್ಲೇರ್ ಘೋಷಣೆಯಿಂದ ಅಸಮಾಧಾನಗೊಂಡಿದ್ದು ನಾಯಕ ಶಾನ್ ಮಸೂದ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪಾಕ್ ಪರ ಅದ್ಭುತ ಇನ್ನಿಂಗ್ಸ್ ಆಡಿದ ರಿಜ್ವಾನ್ ಅಜೇಯ 171 ರನ್‌ಗಳನ್ನು ಕಲೆಹಾಕಿದ್ದರು. ದ್ವಿಶತಕ ಪೂರೈಸಲು 29 ರನ್ ಮಾತ್ರ ಬೇಕಿದ್ದವು. ಆದರೆ ಇದಕ್ಕೂ ಮುನ್ನವೇ ಶಾನ್ ಮಸೂದ್ ಡಿಕ್ಲೇರ್ ಘೋಷಿಸಿರುವುದು ರಿಜ್ವಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ರಿಜ್ವಾನ್ಗೆ ದ್ವಿಶತಕದ ಅವಕಾಶ ನೀಡದೇ ನಾಯಕ ಉದ್ದೇಶಪೂರ್ವಕವಾಗಿ ತಂಡದ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಿದ್ದಾರೆ.
ಇದು ರಿಜ್ವಾನ್ ಟೆಸ್ಟ್ ವೃತ್ತಿಜೀವನದ ಅತ್ಯಧಿಕ ಸ್ಕೋರ್ ಆಗಿದ್ದ ಕಾರಣ ದಿನದಾಟದ ಅಂತ್ಯದವರೆಗೆ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಬೇಕಿತ್ತು. ಅವರು ಖಂಡಿತವಾಗಿಯೂ ದ್ವಿಶತಕ ಪೂರ್ಣಗೊಳಿಸುತ್ತಿದ್ದರು ಎಂಬುದು ಅಭಿಮಾನಿಗಳ ಅಭಿಪ್ರಾಯ.
ಈ ಪಂದ್ಯದಲ್ಲಿ ರಿಜ್ವಾನ್ 239 ಎಸೆತಗಳಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್ ಸಮೇತ ಅಜೇಯ ಇನಿಂಗ್ಸ್ ಆಡಿದರು.