ಕರ್ನಾಟಕ

karnataka

ETV Bharat / sports

'ನಾನು ಮತ್ತೆ ಆ ತಪ್ಪು ಮಾಡಲ್ಲ': ವಿಮಾನದಲ್ಲಿ ನೀರಿನ ಬಾಟಲಿ ಜೊತೆ ಕ್ರಿಕೆಟಿಗ ಮಯಾಂಕ್​ ಪೋಸ್​ - ರಣಜಿ ಟ್ರೋಫಿ

ನೀರೆಂದು ಭಾವಿಸಿ ವಿಷಕಾರಿ ದ್ರವ ಕುಡಿದು ಪಡಿಪಾಟಲುಪಟ್ಟಿದ್ದ ಕರ್ನಾಟಕದ ಕ್ರಿಕೆಟಿಗ ಮಯಾಂಕ್​ ಅಗರ್ವಾಲ್ ವಿಮಾನ ಪ್ರಯಾಣದ ವೇಳೆ ತಮಾಷೆಯ ಪೋಸ್ಟ್​ ಅನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕ್ರಿಕೆಟಿಗ ಮಯಾಂಕ್
ಕ್ರಿಕೆಟಿಗ ಮಯಾಂಕ್

By ETV Bharat Karnataka Team

Published : Feb 20, 2024, 2:04 PM IST

ಹೈದರಾಬಾದ್:ರಣಜಿ ಪಂದ್ಯವಾಡಲು ದೆಹಲಿಗೆ ತೆರಳುತ್ತಿದ್ದಾಗ ವಿಮಾನದಲ್ಲಿದ್ದ ಬಾಟಲಿಯಲ್ಲಿದ್ದ ವಿಷಕಾರಿ ದ್ರವವನ್ನು ನೀರೆಂದು ಸೇವಿಸಿ ಕುಡಿದು ತೀವ್ರ ಅಸ್ವಸ್ಥರಾಗಿದ್ದ ಕರ್ನಾಟಕದ ಕ್ರಿಕೆಟಿಗ ಮಯಾಂಕ್​ ಅಗರ್ವಾಲ್​ 'ಮತ್ತೊಮ್ಮೆ ಅಂಥ ತಪ್ಪು ಮಾಡಲ್ಲ' ಎಂಬ ರೀತಿಯಲ್ಲಿ ತಮಾಷೆಯ ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ.

ಕ್ವಾರ್ಟರ್​ ಫೈನಲ್​ ಪಂದ್ಯವಾಡಲು ಮಹಾರಾಷ್ಟ್ರದ ನಾಗ್ಪುರಕ್ಕೆ ವಿಮಾನದಲ್ಲಿ ಬರುವ ವೇಳೆ ನೀರಿನ ಬಾಟಲಿಯ ಜೊತೆಗಿನ ಫೋಟೋವನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಮಯಾಂಕ್​, 'ಯಾವುದೇ ಅಪಾಯವನ್ನು ತೆಗೆದುಕೊಳ್ಳುವುದು ಬೇಡ' (ಬಿಲ್ಕುಲ್ ಭಿ ರಿಸ್ಕ್ ನಹೀ ಲೆನೆ ಕಾ) ಎಂಬ ಒಕ್ಕಣೆ ನೀಡಿದ್ದಾರೆ. ಇದು ತಮ್ಮನ್ನು ತಾವೇ ಕಾಲೆಳೆದುಕೊಳ್ಳುವಂತಿದೆ.

ಅಂದು ಏನಾಗಿತ್ತು?:ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ತ್ರಿಪುರಾ ವಿರುದ್ಧದ ಪಂದ್ಯದ ನಂತರ ತಮ್ಮ ತಂಡದೊಂದಿಗೆ ದೆಹಲಿಗೆ ವಿಮಾನವೇರಿದ್ದರು. ನೀರು ಎಂದುಕೊಂಡು ತಾನು ಕುಳಿತಿದ್ದ ಸೀಟಿನ ಎದುರಿನ ಪೌಚ್​ನಲ್ಲಿದ್ದ ದ್ರವ ಸೇವಿಸಿದ್ದಾರೆ. ತಕ್ಷಣವೇ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇದನ್ನು ಗಮನಿಸಿದ ಸಹೋದ್ಯೋಗಿಗಳು ಸ್ಥಳೀಯ ಐಎಲ್ಎಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಮಯಾಂಕ್ ಗಂಟಲಿನಲ್ಲಿ ಊತ ಮತ್ತು ಗುಳ್ಳೆಗಳಿರುವುದನ್ನು ಗಮನಿಸಿದ್ದಾರೆ. ಮಯಾಂಕ್​ ಚಿಕಿತ್ಸೆ ಪಡೆಯುತ್ತಿರುವ ವೇಳೆ ನಾಲ್ಕು ಗಂಟೆಗೂ ಅಧಿಕ ಸಮಯ ಮಾತನಾಡಲು ಸಾಧ್ಯವಾಗದೇ ಒದ್ದಾಡಿದ್ದರು.

ಪ್ರಕರಣ ದಾಖಲು:ವಿಮಾನದಲ್ಲಿನ ಪೌಚ್​​ನಲ್ಲಿ ವಿಷಪೂರಿತ ದ್ರವ ಇಟ್ಟಿದ್ದರ ವಿರುದ್ಧ ದೂರು ನೀಡಲಾಗಿತ್ತು. ಘಟನೆಯನ್ನು ಸೂಕ್ತವಾಗಿ ತನಿಖೆ ಮಾಡಬೇಕು ಎಂದು ಆಗ್ರಹಿಸಲಾಗಿತ್ತು. ಕರ್ನಾಟಕ ತಂಡದ ಮ್ಯಾನೇಜರ್ ಅಗರ್ವಾಲ್ ಪರವಾಗಿ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ತ್ರಿಪುರಾ ಪೊಲೀಸರಿಗೆ ಮನವಿ ಮಾಡಿದ್ದರು. ಪಶ್ಚಿಮ ತ್ರಿಪುರಾ ಪೊಲೀಸ್ ಅಧೀಕ್ಷಕ ಕೆ.ಕಿರಣ್ ಕುಮಾರ್ ಅವರಿಗೆ ಲಿಖಿತ ದೂರು ಸಲ್ಲಿಸಲಾಗಿತ್ತು. ಅಗರ್ತಲಾದ ನ್ಯೂ ಕ್ಯಾಪಿಟಲ್ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ವಾರ್ಟರ್​ಫೈನಲ್​ಗೆ ಕರ್ನಾಟಕ:ಎಲೈಟ್ ಗುಂಪಿನಲ್ಲಿ 27 ಅಂಕ ಗಳಿಸಿರುವ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಫೆಬ್ರವರಿ 23 ರಂದು ನಾಗ್ಪುರದಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ವಿದರ್ಭವನ್ನು ಎದುರಿಸಲಿದೆ. ಎರಡನೇ ಕ್ವಾರ್ಟರ್ ಫೈನಲ್ ಮುಂಬೈ ಮತ್ತು ವಡೋಡಾ ನಡುವೆ ನಡೆದರೆ, ಮೂರನೇ ಕ್ವಾರ್ಟರ್ ಫೈನಲ್ ತಮಿಳುನಾಡು ಮತ್ತು ಸೌರಾಷ್ಟ್ರ, ನಾಲ್ಕನೇ ಕ್ವಾರ್ಟರ್ ಫೈನಲ್‌ನಲ್ಲಿ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶ ತಂಡಗಳು ಎದುರಾಗಲಿವೆ. ಎಲ್ಲ ಪಂದ್ಯಗಳು ಫೆಬ್ರವರಿ 23 ರಿಂದ ಫೆಬ್ರವರಿ 27 ರವರೆಗೆ ನಡೆಯಲಿದೆ. ಮಾರ್ಚ್ 2 ರಂದು ಸೆಮಿಫೈನಲ್, ಮಾರ್ಚ್ 10 ರಂದು ಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ:ಮಯಾಂಕ್​ ಅಗರ್ವಾಲ್​ ಅಪಾಯದಿಂದ ಪಾರು, ಶೀಘ್ರವೇ ಬೆಂಗಳೂರಿಗೆ ರವಾನೆ: ಕೆಎಸ್​ಸಿಎ ಮಾಹಿತಿ

ABOUT THE AUTHOR

...view details