ದಿಬ್ರೂಗಢ(ಅಸ್ಸಾಂ): 6 ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತದ ಹೆಮ್ಮೆಯ ಬಾಕ್ಸರ್ ಮೇರಿ ಕೋಮ್ ವಯಸ್ಸಿನ ಮಿತಿಯಿಂದಾಗಿ ಬಾಕ್ಸಿಂಗ್‌ಗೆ ಬುಧವಾರ ನಿವೃತ್ತಿ ಪ್ರಕಟಿಸಿದರು. ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಐಬಿಎ) ನಿಯಮಗಳ ಪ್ರಕಾರ, ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳು 40 ವರ್ಷದ ಬಳಿಕ ಆಡಲು ಅವಕಾಶವಿರುವುದಿಲ್ಲ. ಹಾಗಾಗಿ ಮೇರಿ ತಾವು ಬಹಳ ಇಷ್ಟಪಡುವ ಪ್ರೀತಿಯ ಬಾಕ್ಸಿಂಗ್‌ಗೆ ಅನಿವಾರ್ಯವಾಗಿ ವಿದಾಯ ಹೇಳಿದ್ದಾರೆ.
"ನನಗಿನ್ನೂ ಹಸಿವಿದೆ...": ಕಾರ್ಯಕ್ರಮವೊಂದರಲ್ಲಿ ನಿವೃತ್ತಿ ನಿರ್ಧಾರದ ಕುರಿತು ಮಾತನಾಡಿದ ಮೇರಿ, "ನನಗೆ ಬಾಕ್ಸಿಂಗ್ನಲ್ಲಿ ಇನ್ನೂ ಸಾಧಿಸುವ ಹಸಿವಿದೆ. ಆದರೆ ವಯಸ್ಸಿನ ಮಿತಿಯಿಂದ ಸ್ಪರ್ಧಿಸಲು ಸಾಧ್ಯವಿಲ್ಲ. ನಾನಿನ್ನೂ ಹೆಚ್ಚು ಹೆಚ್ಚು ಆಡಲು ಬಯಸುತ್ತೇನೆ. ಆದರೆ ಬಲವಂತವಾಗಿ ಬಾಕ್ಸಿಂಗ್ ತೊರೆಯಲೇಬೇಕಾಗಿದೆ. ಜೀವನದಲ್ಲಿ ನಾನು ಎಲ್ಲವನ್ನೂ ಸಾಧಿಸಿದ್ದೇನೆ" ಎಂಬ ಸಾರ್ಥಕ ನುಡಿಗಳನ್ನಾಡಿದರು.
ಬಾಕ್ಸರ್ ಮೇರಿ ಸಾಧನೆ: ಬಾಕ್ಸಿಂಗ್ ಇತಿಹಾಸದಲ್ಲಿ ಆರು ವಿಶ್ವ ಪ್ರಶಸ್ತಿಗಳನ್ನು ಗೆದ್ದ ದೇಶದ ಮೊದಲ ಮಹಿಳಾ ಬಾಕ್ಸರ್ ಮೇರಿ. ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಇವರು 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದರು. 2012ರ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚು ಜಯಿಸಿದರು.
ತನ್ನ 18ನೇ ವಯಸ್ಸಿನಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾದ ಸ್ಕ್ರಂಟನ್‌ನಲ್ಲಿ ನಡೆದ ಉದ್ಘಾಟನಾ ವಿಶ್ವ ಕೂಟದಲ್ಲಿ ಮೇರಿ ತನ್ನನ್ನು ಬಾಕ್ಸಿಂಗ್ ಜಗತ್ತಿಗೆ ಪರಿಚಯಿಸಿಕೊಂಡರು. ತನ್ನದೇ ಆದ ಬಾಕ್ಸಿಂಗ್ ಶೈಲಿಯೊಂದಿಗೆ ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು. ಅಂದು ಉತ್ತಮ ಪ್ರದರ್ಶನ ನೀಡಿ ಫೈನಲ್ ತಲುಪಿದ್ದರು. ಫೈನಲ್‌ನಲ್ಲಿ ಗೆಲುವು ಸಿಗಲಿಲ್ಲ. ಆದರೆ ಇಲ್ಲಿಂದ ಬಾಕ್ಸಿಂಗ್ನಲ್ಲಿ ಮೇರಿಯ ಭವಿಷ್ಯ ಬದಲಾಯಿತು. ಹೀಗೇ ಮುಂದುವರೆದು, ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯರಾದರು.
2005, 2006, 2008 ಮತ್ತು 2010ರ ಆವೃತ್ತಿಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದಿದ್ದಾರೆ. 2008ರ ಪ್ರಶಸ್ತಿ ಗೆದ್ದ ನಂತರ ಅವಳಿ ಮಕ್ಕಳಿಗೆ ಜನ್ಮ ನೀಡಿ ಕೊಂಚ ವಿರಾಮ ಪಡೆದರು. 2012ರ ಒಲಿಂಪಿಕ್ ಪದಕ ಜಯಿಸಿದ ನಂತರ ಮೂರನೇ ಮಗುವಿಗೆ ಜನ್ಮ ನೀಡಿ ಮತ್ತೊಮ್ಮೆ ಬಾಕ್ಸಿಂಗ್‌ಗೆ ತಾತ್ಕಾಲಿಕ ಬ್ರೇಕ್ ಕೊಟ್ಟರು. ಇದಾದ ಬಳಿಕ ದೆಹಲಿಯಲ್ಲಿ ನಡೆದ 2018ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮತ್ತೆ ತನ್ನ ಬಲ ಪ್ರದರ್ಶನ ತೋರಿದರು. ಉಕ್ರೇನ್‌ನ ಹನ್ನಾ ಒಖೋಟಾ ವಿರುದ್ಧ 5-0ರ ಗೆಲುವಿನೊಂದಿಗೆ ಆರನೇ ವಿಶ್ವ ಚಾಪಿಂಯನ್ ಆಗಿ ಹೊರಹೊಮ್ಮುತ್ತಾರೆ. ಇದಾದ ಒಂದು ವರ್ಷದಲ್ಲಿ 8ನೇ ವಿಶ್ವ ಪದಕವನ್ನೂ ಬಾಚಿಕೊಳ್ಳುತ್ತಾರೆ.
ಇದನ್ನೂ ಓದಿ:ಫೆಬ್ರವರಿ 23 ರಿಂದ ಮಹಿಳಾ ಪ್ರೀಮಿಯರ್ ಲೀಗ್ ಆರಂಭ: ದೆಹಲಿ, ಬೆಂಗಳೂರು ಆತಿಥ್ಯ, ಮಾರ್ಚ್ 17ಕ್ಕೆ ಫೈನಲ್